ಶಿವಮೊಗ್ಗ: ಕಾಲೇಜ್ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಮತ್ತು ಬಸ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಶಾಖೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕೋವಿಡ್ ಎರಡನೇ ಲಾಕ್ ಡೌನ್ ನಂತರ ರಾಜ್ಯದಲ್ಲಿ ಶಾಲಾ, ಕಾಲೇಜ್ ತೆರೆದು ತಿಂಗಳುಗಳೇ ಕಳೆದಿವೆ. ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಭರದಿಂದ ಸಾಗಿವೆ. ಜೊತೆಗೆ ಇನ್ನೂ ಕೆಲವು ಕೋರ್ಸ್ ಗಳ ವಿದ್ಯಾರ್ಥಿಗಳು ಕೆಲವೇ ದಿನಗಳಲ್ಲಿ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಆದರೆ, ಸರ್ಕಾರ ಕಾಲೇಜ್ ವಿದ್ಯಾರ್ಥಿಗಳಿಗೆ ಎಸ್.ಎಸ್.ಪಿ. ಸ್ಕಾಲರ್ ಶಿಪ್ ಅಡಿಯಲ್ಲಿ ನೀಡುವ ಸ್ಕಾಲರ್ ಶಿಪ್ ಸಮರ್ಪಕವಾಗಿ ನೀಡದೇ ಇರುವುದರಿಂದ ಮತ್ತು ಹಲವು ಮಾರ್ಗಗಳಿಗೆ ಹಾಗೂ ನಗರದಿಂದ ಹೊರಗಡೆ ಇರುವ ವಸತಿ ನಿಲಯಗಳಿಗೆ ಸೂಕ್ತ ಬಸ್ ಸೌಲಭ್ಯ ಒದಗಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಳೆದ 2020 -21 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಎಸ್.ಸಿ., ಎಸ್.ಟಿ., ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳಿಗೆ ಎಸ್.ಎಸ್.ಪಿ. ಅಡಿಯಲ್ಲಿ ಸ್ಕಾಲರ್ ಶಿಪ್ ನೀಡಲು ಅರ್ಜಿ ಆಹ್ವಾನಿಸಿತ್ತು. ಈ ನಿಟ್ಟಿನಲ್ಲಿ ಕಳೆದ 3 ತಿಂಗಳಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುವುದನ್ನು ಆರಂಭಿಸಲಾಗಿತ್ತು. ಸರ್ಕಾರ ಕೋಟಾದ ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಬಾಕಿ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಸ್ಕಾಲರ್ ಶಿಪ್ ನೀಡಬೇಕೆಂದು ಆಗ್ರಹಿಸಿದರು.ಶಿವಮೊಗ್ಗ ನಗರದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ಆದರೆ, ಬಹುತೇಕ ಸರ್ಕಾರ ವಿದ್ಯಾರ್ಥಿಗಳ ವಸತಿ ನಿಲಯಗಳು ನಗರದ ಹೊರ ವಲಯದಲ್ಲಿದ್ದು, ಆ ಭಾಗಗಳಿಂದ ನಗರದ ಕಾಲೇಜುಗಳಿಗೆ ಬರಲು ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಕಾಲೇಜುಗಳು ಆರಂಭವಾಗುವ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗದೇ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ಮನವಿ ಪಡೆಯುವವರೆಗೆ ರಸ್ತೆಯನ್ನು ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಇದರಿಂದ ಸವಳಂಗ ರಸ್ತೆಯಲ್ಲಿ ಸುಮಾರು ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ವಿಜಯ್ ಗೌಡರ್, ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು. 

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…