ಶಿವಮೊಗ್ಗ: ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಗರುಹುಕುಂ ರೈತರಿಗೆ ಸಾಗುವಳಿ ಚೀಟಿ ಕೊಡಬೇಕು ಎಂದ ಅಗಸವಳ್ಳಿ ಗ್ರಾಮದ ಸುತ್ತಮುತ್ತ ಇರುವ ಸಾಗುವಳಿ ರೈತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಗಸವಳ್ಳಿಯ ಸರ್ವೇ ನಂ. 167ರಲ್ಲಿ ಅಗಸವಳ್ಳಿ ಸುತ್ತಮುತ್ತ ಗ್ರಾಮಗಳ ರೈತರು ಕಳೆದ 50ವರ್ಷಗಳಿಂದ ಬಗರುಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಫಾರಂ ನಂ.50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಬಗರುಹುಕುಂ ಸಾಗುವಳಿಯಿಂದಲ್ಲೆ ರೈತರ ಜೀವನ ನಡೆಯಬೇಕಾಗಿದೆ. ಕೆಲವರಿಗೆ ನಿವೇಶನ ಮಾಡಿ ಹಕ್ಕುಪತ್ರ ಕೂಡ ನೀಡಿರುತ್ತಾರೆ. ಕೆಲವರು ಸುಳ್ಳು ಹೇಳಿ ನಿವೇಶನ ಪಡೆದಿದ್ದಾರೆ. ಆದ್ದರಿಂದ ನಿಜವಾದ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರ ಈ ಹಿಂದೆ ಈ ಬಗರುಹುಕುಂ ಜಮೀನುಗಳನ್ನು ಸರ್ವೇ ಮಾಡಲು ಆದೇಶ ನೀಡಲಾಗಿತ್ತು. ಆದರೆ ಸರ್ವೇ ನಡೆಯಲಿಲ್ಲ. ಈ ಹಿಂದೆ 2008ರಲ್ಲಿ ಸರ್ವೇ ನಡೆದಿದ್ದು, ಅದರ ಪ್ರಕಾರವೇ ಸಾಗುವಳಿ ಚೀಟಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ಪ್ರಮುಖರಾದ ಟಿ.ಪೆರುಮಾಳ್, ಕಾಂತರಾಜ್, ಗಂಗಾಧರ್, ಪಿ.ಟಿ.ಸೆಲ್ವಂ, ಬೈರೋಜಿ, ಓಂಕಾರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.