ಶಿವಮೊಗ್ಗ: ಸಹಕಾರ ಸಂಘಗಳಲ್ಲಿ ಸಾಲ ಮನ್ನಾದಂತಹ ಯೋಜನೆಗಳು ಇಲ್ಲ. ಸಾಲ ಪಡೆದವರು ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಗಂಗಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ಮೇಘರಾಜ್ ಹೇಳಿದರು.ಅವರು ಪ್ರಸಕ್ತ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರ ಸಂಘಗಳು ಅತ್ಯಂತ ಕಷ್ಟದಲ್ಲಿವೆ. ಸಾಲ ತೆಗೆದುಕೊಂಡವರು ಮರು ಪಾವತಿ ಮಾಡದಿದ್ದರೆ ಸಂಘಗಳ ಬೆಳವಣಿಗೆ ಆಗುವುದಿಲ್ಲ. ಆದ್ದರಿಂದ ಇನ್ನು ಮುಂದೆ ಸಾಲಕ್ಕಾಗಿ ಜಾಮೀನು ನೀಡುವವರು ಕೂಡ ಚೆಕ್ ನೀಡಬೇಕಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು. ಮತ್ತು ಯಾವುದೇ ಸಮಾಜ ಮುಖ್ಯ ವಾಹಿನಿಗೆ ಬರಲು ಶಿಕ್ಷಣದ ಅವಶ್ಯಕತೆ ಇದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎ. ಹಾಲೇಶಪ್ಪ, ಸಂಘಟನೆಯಿಂದ ಮಾತ್ರ ಯಾವುದೇ ಸಮಾಜ ಅಥವಾ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಗಂಗಾಮತ ಸಮಾಜದ ಸಹಕಾರ ಸಂಘ ಅಭಿವೃದ್ಧಿ ಪಥದತ್ತ ನಡೆಯುತ್ತಿದೆ.
ಈ ವರ್ಷ ಲಾಭದಲ್ಲಿದ್ದು, ಶೇ. 9 ರಷ್ಟಿ ಡಿವಿಡೆಂಡ್ ನೀಡಲಾಗುತ್ತಿದೆ ಎಂದರು.ಜಿ. ಶೇಖರಪ್ಪ ಮಾತನಾಡಿ, ಸಮಾಜದ ಎಲ್ಲರೂ ಸೇವಾ ಮನೋಭಾವನೆ ಹೊಂದಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಹಳೆಯ ಬೇರಿನ ಜೊತೆಗೆ ಹೊಸ ಚಿಗುರು ಬೆಳೆಯುತ್ತಿವೆ. ಇದು ಸ್ವಾಗತದ ವಿಷಯವಾಗಿದೆ ಎಂದರು. ಆಂತರಿಕ ಲೆಕ್ಕಪರಿಶೋಧಕ ಆರ್. ಜನಾರ್ಧನ್ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಡಿ.ಬಿ. ಕೆಂಚಪ್ಪ, ಬಸವಂತಪ್ಪ ಬಂಗೇರಾ, ಎಸ್.ಬಿ. ಅಶೋಕ್ ಕುಮಾರ್, ಚಂದ್ರಶೇಖರ್, ಸಿಪಿಐ ರುದ್ರೇಶ್, ಲಕ್ಷ್ಮಣ್, ನಿರ್ದೇಶಕರಾದ ಶಿವಕುಮಾರ್, ಪಿ. ನಾಗೇಶ್, ವೆಂಕಟೇಶ್, ಮಂಜುನಾಥ್, ಮಂಜುಳಾ ಸುಲ್ತಾನ್ ಪುರ್, ಎಲ್.ಪಿ. ರಂಗನಾಥ್, ಹರೀಶ್, ಹನುಮೇಶ್, ಸತೀಶ್ ಮೊದಲಾದವರಿದ್ದರು.