ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅನೇಕರು ಅಕಾಲಿಕ ಮೃತ್ಯುವಿಗೆ ಬಲಿಯಾಗುತ್ತಿದ್ದು , ಮೃತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ರೋಟರಿಯ ಕಟ್ಟಿಗೆ ಆಧಾರಿತ ಚಿತಾಗಾರದಲ್ಲಿ ದಿನಾಂಕ 04-06-2021 ರಿಂದ ದಿನಾಂಕ 31-07-2021(ಜುಲೈ ಅಂತ್ಯದವರೆಗೆ) ವರೆಗೆ ಮಾತ್ರ ಪ್ರತಿ ಶವದ ದಹನಕ್ಕೆ ಈಗ ವಿಧಿಸುತ್ತಿರುವ ಶುಲ್ಕ ರೂ 2100/- ರಲ್ಲಿ ರಿಯಾಯಿತಿ ಮಾಡಿ ಕೇವಲ ರೂ 1000/- ಶುಲ್ಕವನ್ನು ಮಾತ್ರ ಪಡೆಯಲಾಗುತ್ತದೆ. ಸಾರ್ವಜನಿಕರು ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಶವ ದಹನ ಕ್ರಿಯೆಗೆ ಕೇವಲ ರೂ 1000/- ಮಾತ್ರ ಅಲ್ಲಿನ ಸಿಬ್ಬಂದಿಗೆ ಪಾವತಿಸಬೇಕಾಗಿ ಚಿತಾಗಾರದ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗೌರ್ನರ್ ಹೆಚ್ ಎಲ್ ರವಿ, ಉಪಾಧ್ಯಕ್ಷರಾದ ಎಚ್ ಬಿ ಆದಿಮೂರ್ತಿ, ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರಯ್ಯ, ಹಾಗೂ ಟ್ರಸ್ಟಿನ ಜಂಟಿ ಕಾರ್ಯದರ್ಶಿ ಸುರೇಶ್ ಕುಮಾರ್ ಇವರು ಕೋರಿರುತ್ತಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಿಧನರಾದ ವ್ಯಕ್ತಿಗಳ ಶವ ದಹನ ಕ್ರಿಯೆಗೆ ರೋಟರಿಯ ಕಟ್ಟಿಗೆ ಆಧಾರಿತ ಚಿತಾಗಾರದಲ್ಲಿ ವಿಧಿಸುತ್ತಿರುವ ಶುಲ್ಕವನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಕಡಿಮೆ ಮಾಡುವ ಕುರಿತು ದಿನಾಂಕ 03.06 .2021 ರಂದು ಶಿವಮೊಗ್ಗ ನಗರಪಾಲಿಕೆಯಲ್ಲಿ ನಡೆದ ಪೂಜ್ಯ ಮಹಾಪೌರರು ಉಪ ಮಹಾಪೌರರು, ಪೌರಾಯುಕ್ತರು, ಕಾರ್ಪೊರೇಟರ್ ಗಳು ಹಾಗೂ ರೋಟರಿ ಚಿತಾಗಾರದ ಟ್ರಸ್ಟಿನ ಪದಾಧಿಕಾರಿಗಳ ಜಂಟಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಮೇಲ್ಕಂಡ ಕ್ರಮವನ್ನು ತೆಗೆದುಕೊಂಡು ದಿನಾಂಕ 04-06 -2021 ರಿಂದ ದಿನಾಂಕ 31-07-2021 ರವರಿಗೆ ಮಾತ್ರ ಜಾರಿಯಲ್ಲಿರುತ್ತದೆ.
ದಿನಾಂಕ 01-08 2021ರಿಂದ ಹಿಂದಿನಂತೆ ಪ್ರತಿ ಶವದ ದಹನಕ್ಕೆ ಕ್ರಿಯೆಗೆ ರೂ 2100/- ಶುಲ್ಕವನ್ನು ವಿಧಿಸಲಾಗುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ