ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಎನ್.ಎಸ್.ಯು.ಐ, ವತಿಯಿಂದ ಕುವೆಂಪು ವಿವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.ಕುವೆಂಪು ವಿಶ್ವವಿದ್ಯಾನಿಲಯ ವತಿಯಿಂದ ಪ್ರಕಟಿಸಿರುವ 2019 -20 ನೇ ಸಾಲಿನ ದೂರ ಶಿಕ್ಷಣ ವಿದ್ಯಾರ್ಥಿಗಳ ಪ್ರಥಮ ವರ್ಷದ ಪರೀಕ್ಷೆಗಳನ್ನು ರದ್ದುಪಡಿಸಬೇಕು ಕೂಡಲೇ ವಿದ್ಯಾರ್ಥಿಗಳಿಗೆ ಆಗುವ ಸಮಸ್ಯೆಯನ್ನ ವಿಶ್ವವಿದ್ಯಾಲಯ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
2019-20 ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ದೂರ ಶಿಕ್ಷಣ ವಿಭಾಗದಲ್ಲಿ ಪ್ರಥಮ ವರ್ಷದ ಪದವಿಗೆ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಕೊರೋನಾ ಕಾರಣದಿಂದ ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಎರಡು ವರ್ಷ ಪರೀಕ್ಷೆ ನಡೆಸಲು ಸಾಧ್ಯವಾಗಿರುವುದಿಲ್ಲ ಎಂದರು.2019 -20 ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ದೂರಶಿಕ್ಷಣ ವಿಭಾಗದಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಮಾಡಲಾಗಿದೆ ಎಂದು ತಿಳಿಸುವ ಜೊತೆಯಲ್ಲಿ 2021- 2022 ನೇ ಸಾಲಿನ ಅದೇ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗಿದೆ. ಇದೀಗ ಏಕಾಏಕಿ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚಿಸಿರುವುದು ಸರಿಯಲ್ಲ.
ಈಗಾಗಲೇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮೋಟ್ ನೀಡಿ ದ್ವಿತೀಯ ವರ್ಷದ ಪದವಿ ಪ್ರವೇಶಾತಿ ನೀಡಿರುವುದರಿಂದ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಕೂಡಲೇ ಕುವೆಂಪು ವಿವಿ ಹೊರಡಿಸಿರುವ ಪ್ರಥಮ ವರ್ಷದ ಪರೀಕ್ಷೆ ಬರೆಯುವ ಸೂಚನೆ ರದ್ದುಪಡಿಸಬೇಕು. ದ್ವಿತೀಯ ವರ್ಷದ ಪಠ್ಯಕ್ರಮ ಅನುಗುಣವಾಗಿ ಮುಂದಿನ ಪರೀಕ್ಷೆಗಳನ್ನು ನಡೆಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಎನ್.ಎಸ್.ಯು.ಐ. ಶಂಕರಘಟ್ಟದ ಅಧ್ಯಕ್ಷ ಮುರುಗೇಶ್, ನಗರ ಅಧ್ಯಕ್ಷ ವಿಜಯ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ, ಚಂದ್ರೋಜಿರಾವ್, ಆಕಾಶ್, ರವಿ, ಅರ್ಪಿತಾ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.