ರಿಪ್ಪನ್ ಪೇಟೆ : ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪನವರು ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಿಂದ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದ ಮಹಾಲಕ್ಷ್ಮಿ ಅಣ್ಣಪ್ಪರವರು ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದರು. ಈ ಬಗ್ಗೆ ಆಕ್ರೋಶಗೊಂಡಿರುವ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಮಹಾಲಕ್ಷ್ಮಿ ಅಣ್ಣಪ್ಪರವರು ಈ ಕೂಡಲೇ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಆಸೀಫ಼್ ಭಾಷಾಸಾಬ್ ಮಹಾಲಕ್ಷ್ಮಿ ಅಣ್ಣಪ್ಪ ರವರನ್ನು ಕಳೆದ ಫೆಬ್ರವರಿಯಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಒಂಬತ್ತು ಸದಸ್ಯರು ಅವರಿಗೆ ಮತ ನೀಡಿ ಗೆಲ್ಲಿಸಿದ್ದೆವು ಈಗ ಅವರ ಸ್ವಾರ್ಥಕ್ಕೊಸ್ಕರ ಬಿಜೆಪಿಗೆ ಹೋಗಿದ್ದಾರೆ.ಅವರಿಗೆ ಕಿಂಚಿತ್ತೂ ನೈತಿಕತೆ ಇದ್ದರೆ ಈ ಕೂಡಲೇ ರಾಜಿನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ ಎಂದರು.
ಸದಸ್ಯ ಮಧುಸೂದನ್ ಮಾತನಾಡಿ ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿ ಉಪಾಧ್ಯಕ್ಷೆಯಾಗಿರುವ ಮಹಾಲಕ್ಷ್ಮಿ ರಾಜೀನಾಮೆ ನೀಡಿ ಹೊಸದಾಗಿ ಚುನಾವಣೆ ಎದುರಿಸಿ ಬರಲಿ ಅವರ ಎದುರು ನಾವು ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಸದಸ್ಯರು ಒಕ್ಕೊರಲ ನಿರ್ಧಾರವನ್ನು ಪ್ರಕಟಿಸುತ್ತಾ ಕೂಡಲೇ ರಾಜೀನಾಮೆ ಕೊಡುವಂತೆ ಒತ್ತಾಯಿಸಿ ಸಭೆಯನ್ನು ಬಹಿಷ್ಕರಿಸಿರುವುದಾಗಿ ಹೇಳಿ ಅಭಿವೃದ್ದಿಯ ಹಿತದೃಷ್ಟಿಯಿಂದ ಪಕ್ಷದಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ವಿವರಿಸಿದರು.
ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್,ಗಣಪತಿ,ಧನಲಕ್ಷ್ಮಿ, ನಿರುಪಮಾ ರಾಕೇಶ್,ಸಾರಾಭಿ,ಪ್ರಕಾಶ್ ಪಾಲೇಕರ್ ಪಾಲ್ಗೊಂಡಿದ್ದರು.