ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಸಿಬ್ಬಂದಿಗಳಿಗಾಗಿ ಆರೋಗ್ಯ ವಿಮೆ ಜಾರಿಗೆ ತಂದಿರುವುದು ನಮ್ಮ ಹೆಮ್ಮೆಯಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಹೇಳಿದರು.

ಅವರು ಇಂದು ಡಿಸಿಸಿ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಮತ್ತು ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.ಡಿಸಿಸಿ ಬ್ಯಾಂಕ್ ಇದೇ ಮೊದಲ ಬಾರಿಗೆ ಬ್ಯಾಂಕಿನ ಸುಮಾರು 177 ನೌಕರರಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೆ ತಂದಿದೆ. ಇದರಿಂದ ನೌಕರರು, ಅವರ ಕುಟುಂಬಗಳ ಸದಸ್ಯರು ಸೇರಿದಂತೆ ಸುಮಾರು 620 ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. 5 ಲಕ್ಷ ರೂ. ವರೆಗೆ ವಿಮಾ ಮೊತ್ತ ಇರುತ್ತದೆ. ಯೋಜನೆ ಒಳಪಟ್ಟ ಯಾವುದೇ ಆಸ್ಪತ್ರೆಗಳಲ್ಲಿ ಹಣ ಕಟ್ಟುವ ಅವಶ್ಯಕತೆ ಇಲ್ಲ. ಎಲ್ಲಾ ರೀತಿಯ ಖರ್ಚನ್ನು ವಿಮಾ ಕಂಪನಿಯೇ ನೀಡುತ್ತದೆ. ಇದರ ಜೊತೆಗೆ ಮಹಿಳೆಯರ ಹೆರಿಗೆಗೆ 30 ಸಾವಿರ ರೂ. ಹಾಗೂ ಶಸ್ತ್ರ ಚಿಕಿತ್ಸೆಗೆ 50 ಸಾವಿರ ರೂ. ನೀಡಲಾಗುತ್ತದೆ. ವಿಮಾ ಅವಧಿ 1 ವರ್ಷವಿದ್ದು, ವಿಮೆಯ ಸಂಪೂರ್ಣ ಹಣವನ್ನು ಬ್ಯಾಂಕ್ ನೀಡುತ್ತದೆ.

ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು, ನೌಕರರು ಇದರ ಪ್ರಯೋಜನ ಪಡೆಯಬೇಕು ಎಂದರು.ಡಿಸಿಸಿ ಬ್ಯಾಂಕ್ ಎಲ್ಲಾ ಆರೋಪಗಳಿಂದ ಮುಕ್ತವಾಗಿದ್ದು, ಈಗ ಮತ್ತೆ ಜನರ ವಿಶ್ವಾಸ ಗಳಿಸಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 10.12 ಕೋಟಿ ಲಾಭ ಗಳಿಸಿದೆ. ರೈತರಿಗೆ ಹಲವು ರೀತಿಯ ಸಾಲಗಳನ್ನು ನೀಡಿದೆ. ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಸುಮಾರು 2 ಕೋಟಿ ರೂ.ವರೆಗೆ ಸಾಲ ವಿತರಣೆ ಮಾಡಲಾಗಿದೆ. ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ. ಹೊಸ ರೈತರು, ಪರಿಶಿಷ್ಟ ವರ್ಗದ ರೈತರಿಗೆ ಹೆಚ್ಚುವರಿ ಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲ ನೀಡಲಾಗಿದೆ. ಹೈನುಗಾರಿಕೆಗಾಗಿ 1244 ಸದಸ್ಯರಿಗೆ 1.91 ಕೋಟಿ ರೂ. ಕೆಸಿಸಿ ಸಾಲ ನೀಡಿದ್ದೇವೆ ಎಂದರು.ಇದರ ಜೊತೆಗೆ ರೈತರಿಗಾಗಿಯೇ ವಾಹನ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಕೇವಲ 75 ಪೈಸೆ ಮಾಸಿಕ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಸುಮಾರು 187 ರೈತ ಸದಸ್ಯರಿಗೆ 14.72 ಕೋಟಿ ವಾಹನ ಸಾಲ ನೀಡಲಾಗಿದ್ದು, ಈ ಯೋಜನೆ ಜನವರಿ 31 ರ ವರೆಗೆ ಇರಲಿದ್ದು, ಇದರ ಪ್ರಯೋಜನವನ್ನು ಕೂಡ ರೈತರು ಪಡೆಯಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ನಿರ್ದೇಶಕರಾದ ಎನ್.ಹೆಚ್. ಶ್ರೀಪಾದರಾವ್, ದುಗ್ಗಪ್ಪಗೌಡ, ಎಸ್.ಪಿ. ದಿನೇಶ್, ಹೆಚ್.ಕೆ. ವೆಂಕಟೇಶ್, ಎಂ.ಎಂ. ಪರಮೇಶ್, ಜಿ.ಎನ್. ಸುಧೀರ್, ಬಿ.ಕೆ. ಗುರುರಾಜ್, ಎಂ.ಬಿ. ಶ್ರೀಧರ್, ವ್ಯವಸ್ಥಾಪಕ ನಿರ್ದೇಶಕ ಟಿ. ಮಂಜಪ್ಪ, ಕುಲಕರ್ಣಿ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…