ಶಿವಮೊಗ್ಗ: ಕನ್ನಡಿಗರ ಸ್ವಾಭಿಮಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೆಣಕಿದ್ದು, ಎಂಇಎಸ್ ನಿಷೇಧಿಸಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಅವರು ಇಂದು ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ, ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಪ್ರತಿಕೃತಿ ದಹನ ಮಾಡಿ, ಎಂಇಎಸ್ ಅನ್ನು ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಜ್ಯದ ಇಡೀ ಪೊಲೀಸ್ ವ್ಯವಸ್ಥೆ ಅಲ್ಲಿದ್ದಾಗಲೂ ಸಹ ಪೊಲೀಸ್ ಜೀಪ್ ಗೆ ಬೆಂಕಿ ಹಚ್ಚುವುದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿರುವುದು, ಕನ್ನಡ ಧ್ವಜ ಸುಟ್ಟು ಹಾಕಿರುವುದು, ಬಸವಣ್ಣನ ಭಾವಚಿತ್ರಕ್ಕೆ ಮಸಿ ಬಳಿದಿರುವುದು, ಕನ್ನಡಿಗರ ಮೇಲೆ ಹಲ್ಲೆ ನಡೆಸಿ ಅಟ್ಟಾಡಿಸಿಕೊಂಡು ಹೊಡೆದಿರುವುದು ಎಲ್ಲವನ್ನು ಕನ್ನಡಿಗರು ಇನ್ನುಮುಂದೆ ಸಹಿಸಲಾಗುವುದಿಲ್ಲ ಎಂದರು.
ಕನ್ನಡಿಗರ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದು, ಡಿಸೆಂಬರ್ 31 ರಂದು ನಡೆಯಲಿರುವ ಕರ್ನಾಟಕ ಬಂದ್ ಗೆ ದಲಿತ, ರೈತ, ಕನ್ನಡಪರ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಲು ಬಂದ್ ಅನಿವಾರ್ಯವಾಗಿದೆ ಎಂದರು.ಚಲನಚಿತ್ರ ವಾಣಿಜ್ಯ ಮಂಡಳಿ, ಕೆಲವು ಚಿತ್ರಗಳ ಬಿಡುಗಡೆ ಇರುವುದರಿಂದ ನೈತಿಕ ಬೆಂಬಲ ಮಾತ್ರವೆಂದು ಹೇಳಿತ್ತು. ಅವರಿಗೂ ಕೂಡ ವಾಸ್ತವತೆಯ ಅರಿವನ್ನು ಮೂಡಿಸಲಾಗಿದೆ.
ನಮ್ಮ ಸಂಘಟನೆ ಸೇರಿದಂತೆ ಎಲ್ಲರೂ ಕೂಡ ಬಂದ್ ಗೆ ಬೆಂಬಲ ನೀಡುತ್ತಿದ್ದಾರೆ. ನಮಗೇನು ಬಂದ್ ಮಾಡುವ ಖಯಾಲಿ ಇಲ್ಲ. ಆದರೂ ಕನ್ನಡಿಗರ ಸ್ವಾಭಿಮಾನದ ದೃಷ್ಠಿಯಿಂದ ಇದು ಅನಿವಾರ್ಯ. 28 ಲೋಕಸಭಾ ಸದಸ್ಯರಿದ್ದು, ಅವರು ರಾಷ್ಟ್ರಪತಿ ಮತ್ತು ಪ್ರಧಾನಿ ಭೇಟಿಯಾಗಿ ಕನ್ನಡಿಗರ ಮೇಲೆ ಆದ ದೌರ್ಜನ್ಯದ ಬಗ್ಗೆ ಅವರ ಗಮನಕ್ಕೆ ತಂದು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಎಂಇಎಸ್ ನಿಷೇಧಿಸಬೇಕಿತ್ತು.
ಆದರೆ, ಅನೇಕ ಪಕ್ಷಗಳು ಎಂಇಎಸ್ ಓಟಿಗಾಗಿ ಓಲೈಕೆ ರಾಜಕಾರಣ ಮಾಡಿ ಬರುತ್ತಿದೆ. ಇದನ್ನು ಸಂಘಟನೆ ಉಗ್ರವಾಗಿ ಖಂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೇಬಲ್ ಮಂಜುನಾಥ್ ಪ್ರಮುಖರಾದ ಎಸ್. ಮಧು, ವಿಜಯಕುಮಾರ್, ಅಮರೇಶ್ ಗೌಡ, ಅನಿಲ್, ರವಿ, ಧನಂಜಯ್, ಶೈಲೇಶ್ ಕುಮಾರ್, ವಿನಯ್, ರಾಜು, ಲೋಹಿತ್ ನಾಗಸಂದ್ರ, ಸುಮಂತ್ ರಾಜ್ ಮೊದಲಾದವರಿದ್ದರು.