ಶಿವಮೊಗ್ಗ: ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಕೂಡ ಮುಂದುವರೆದಿದೆ. ಆಳುವ ಸರ್ಕಾರಗಳನ್ನು ನಮ್ಮ ಹೋರಾಟವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಹೋರಾಟನಿರತ ಉಪನ್ಯಾಸಕರು ಆರೋಪಿಸಿದ್ದಾರೆ.
ನಗರದ ಕಮಲಾ ನೆಹರೂ ಕಾಲೇಜ್ ನಿಂದ ಜಾಥಾದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹೋರಾಟ ಮುಂದುವರೆಸಿರುವ ಅತಿಥಿ ಉಪನ್ಯಾಸಕರು, ಗಾಯದ ಮೇಲೆ ಬರೆ ಎಂಬಂತೆ ಒಂದು ಸೆಮಿಸ್ಟರ್ ಗೆ ಮೂರು ತಿಂಗಳಂತೆ ಒಟ್ಟು ಆರು ತಿಂಗಳ ಗೌರವಧನ ನೀಡಿದ 12 ತಿಂಗಳ ಕಾಲ ಸರ್ಕಾರ ಪುಕ್ಕಟೆ ದುಡಿಸಿಕೊಳ್ಳುತ್ತಿರುವುದು ಅಮಾನವೀಯ ಕೃತ್ಯವಾಗಿದೆ. ಆಳುವ ಸರ್ಕಾರಗಳ ಈ ನಿರ್ಧಾರದಿಂದ ಅತಿಥಿ ಉಪನ್ಯಾಸಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇದುವರೆಗೂ ಸುಮಾರು 70 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು.
ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ನಮ್ಮ ಸಮಸ್ಯೆ ಇತ್ಯರ್ಥವಾಗುವವರೆಗೂ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ತಡೆಹಿಡಿಯಬೇಕು ಎಂದು ಮನವಿ ಮಾಡಿದರು.ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಕೆ.ಟಿ. ಗಂಗಾಧರ್ ಮತ್ತು ರೈತ ಸಂಘದ ಪದಾಧಿಕಾರಿಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.ಸರ್ಕಾರಕ್ಕೆ ಕಣ್ಣು, ಕಿವಿ ಏನೂ ಇಲ್ಲ. ಹೃದಯ ಮೊದಲೇ ಇಲ್ಲ. ಇತ್ತೀಚೆಗೆ ಹರ್ಷ ಶಾನುಭೋಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೂಡ ಸರ್ಕಾರಕ್ಕೆ ಪಾಠವಾಗುವುದಿಲ್ಲ. ಅತಿಥಿ ಉಪನ್ಯಾಸಕರು ಈ ಸಮಾಜದಲ್ಲಿ ಶಿಕ್ಷಣ ನೀಡುವವರು. ಈ ಪರಂಪರೆಯೇ ಸಂತೋಷವಾಗಿಲ್ಲ ಎಂದರೆ ಸರ್ಕಾರಕ್ಕೆ ಏನು ಉತ್ತರ ಹೇಳಬೇಕೋ ಗೊತ್ತಿಲ್ಲ. ಅವರ ನ್ಯಾಯಯುತವಾದ ಹೋರಾಟಕ್ಕೆ ರೈತ ಸಂಘ ಬೆಂಬಲ ನೀಡುತ್ತದೆ ಎಂದರು.ಧರಣಿಯಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಡಾ. ಸೋಮಶೇಖರ್ ಶಿಮೊಗ್ಗಿ ಮೊದಲಾದವರಿದ್ದರು.