ಶಿವಮೊಗ್ಗ: ಸೊರಬ ತಾಲೂಕು ಲಕ್ಕವಳ್ಳಿಯ ಮೋಕ್ಷ ಮಂದಿರ ಸಂಸ್ಥಾನ ಜೈನ ಮಠವನ್ನು ಸರ್ಕಾರ ಸಂಪೂರ್ಣ ನ ನಿರ್ಲಕ್ಷಿಸಿದೆ. ಇದರ ಪುನರುಜ್ಜೀವನಕ್ಕೆ ಆಗ್ರಹಿಸಿ ಜ. 12 ರಿಂದ 15 ರವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಠದ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಠ ಸಂಪೂರ್ಣವಾಗಿ ವರದಾ ನದಿಯ ಪ್ರವಾಹದಿಂದ 2019 ರಲ್ಲಿ ಮುಳುಗಿ ಹೋಗಿದೆ. ಅಲ್ಲಿಂದ ಸರ್ಕಾರಕ್ಕೆ ನಾವು ಮಠ ಸಂರಕ್ಷಿಸುವಂತೆ ಪದೇ ಪದೇ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ಇಲಾಖೆಗಳಿಗೂ ಪತ್ರ ಬರೆದಿದ್ದೇವೆ. ಆದರೂ ಕೂಡ ಸರ್ಕಾರವಾಗಲಿ, ಇಲಾಖೆಗಳಾಗಲಿ ಯಾವ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.ಅಲ್ಪಸಂಖ್ಯಾತರು ಎಂಬ ಕಾರಣಕ್ಕೋ ಅಥವಾ ಜೈನ ಮಠ ಎಂಬ ತಾತ್ಸಾರಕ್ಕೋ ಗೊತ್ತಿಲ್ಲ.
ಮಠ ನೀರಿನಲ್ಲಿ ಮುಳುಗಿ ವರ್ಷಗಳೇ ಕಳೆದಿವೆ. ಹಣ ಇದ್ದರೂ ಬಿಡುಗಡೆ ಮಾಡುತ್ತಿಲ್ಲ. ಇದನ್ನು ವಿರೋಧಿಸಿ ಅನಿವಾರ್ಯವಾಗಿ ತಾವು ಉಪವಾಸ ಸತ್ಯಾಗ್ರಹ ಮಾಡಬೇಕಾಗಿದೆ ಎಂದರು.ಅಲ್ಪಸಂಖ್ಯಾತರಾದ ಜೈನರಿಗೆ ಶೇ. 2 ರಷ್ಟು ಅನುದಾನ ಕೂಡ ಸಿಗುತ್ತಿಲ್ಲ. ಆಯೋಗ, ಅಭಿವೃದ್ಧಿ ನಿಗಮಗಳ ಕಣ್ಣಿಗೆ ನಾವು ಬೀಳುವುದೇ ಇಲ್ಲ. ಶಾಸಕರಾಗಲಿ, ಸಂಸದರಾಗಲಿ ಇತ್ತ ಕಡೆ ನೋಡುವುದೂ ಇಲ್ಲ. ದೇವಸ್ಥಾನಗಳಿಗೆ ಸುಲಭವಾಗಿ ಹಣ ನೀಡಲಾಗುತ್ತದೆ. ಆದರೆ, ಜೈನ ಮಠಗಳಿಗೆ ಯಾಕೆ ನೀಡುವುದಿಲ್ಲವೋ ಗೊತ್ತಿಲ್ಲ. ಜೈನರನ್ನು 2 ಬಿಗೆ ಸೇರಿಸಲು ಕೂಡ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಮಠದ ಜೀರ್ಣೋದ್ಧಾರಕ್ಕಾಗಿ ಉಪವಾಸ ಸತ್ಯಾಗ್ರಹ ಅನಿವಾರ್ಯವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂತೋಷ್, ರಾಮಚಂದ್ರ ಇದ್ದರು.