ಶಿವಮೊಗ್ಗ: ಎಂಇಎಸ್ ಸಂಘಟನೆಯನ್ನು ದೇಶದಲ್ಲಿ ನಿಷೇಧಿಸಬೇಕು. ಭಾವನಾತ್ಮಕವಾಗಿ ಒಂದಾಗಿರುವ ಜನರಲ್ಲಿ ಅಶಾಂತಿ, ವೈಷಮ್ಯ ಉಂಟುಮಾಡುತ್ತಿರುವ ಈ ರಾಜಕೀಯ ಪಕ್ಷದ ಮಾನ್ಯತೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭಾಷೆ, ಜಲ, ನೆಲ, ಉಳಿಸಿ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಶಾಂತ ಚಿತ್ತರಾಗಿರಲು ಆಶಿಸುವ ಕನ್ನಡ ಭಾಷಿಕರ ಮೇಲೆ ದಬ್ಬಾಳಿಕೆಯಿಂದಾಗಿ ರಾಜ್ಯಾದ್ಯಂತ ಆಕ್ರೋಶದ ಜ್ವಾಲೆ ಹಬ್ಬುತ್ತಿದೆ. ರಾಜ್ಯದಲ್ಲಿ ಶಾಂತಿ ಕದಲುವಿಕೆಗೆ ಪ್ರೇರೇಪಿಸಿದಂತಾಗಿದೆ. ರಾಷ್ಟ್ರದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಹೊಂದಿರುವ ಕನ್ನಡಿಗರ ಕರ್ನಾಟಕದ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ಮತ್ತು ಸಂಗೊಳ್ಳಿ ರಾಯಣ್ಣನವರ ವಿಗ್ರಹವನ್ನು ವಿರೂಪಗೊಳಿಸುವ ಮೂಲಕ ಅನಾಗರೀಕ ವರ್ತನೆಯನ್ನು ತೋರಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದು ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಒದಗಿಸುವ ಕಾರ್ಯ ಆಗಿರುವುದರಿಂದ ದೌರ್ಜನ್ಯ ಎಸಗಿರುವ ಎಂಇಎಸ್ ಸಂಘಟನೆಯನ್ನು ದೇಶದಲ್ಲಿ ನಿಷೇಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಕುಣಜೆ ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಗಣಪತಿ ಹೆಚ್.ಎಂ. ಹಣಗೆರೆ, ಮುತ್ತಬ್ಬ ಬೆಜ್ಜವಳ್ಳಿ, ಕನ್ನಂಗಿ ಗುರುರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…