ಶಿವಮೊಗ್ಗ: ಉಪವಿಭಾಗ ಜಿಲ್ಲಾಮಟ್ಟದ ಅರಣ್ಯ ಸಮಿತಿಗಳ ಸಭೆಯನ್ನು ಕಾನೂನು ತಿದ್ದುಪಡಿ ಆಗುವವರೆಗೆ ಮುಂದೂಡಬೇಕೆಂದು ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಕಾಯ್ದೆಯಡಿ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಜಮೀನು ಮಂಜೂರು ಮಾಡಲು 75 ವರ್ಷದ ಅನುಭವದ ದಾಖಲೆ ಬೇಕೆಂದಿದೆ. ಇದರಿಂದ ಜಮೀನು ಮಂಜೂರು ಮಾಡುವುದು ಅಸಾಧ್ಯವಾಗಿದೆ. ಆದ್ದರಿಂದ 25 ವರ್ಷದ ಅನುಭವದ ದಾಖಲೆ ಸಾಕು ಎಂದು ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಮುಖ್ಯಮಂತ್ರಿ ಅವರು ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದಾರೆ ಹಾಗೂ ಸಂಸದ ಬಿ.ವೈ.ರಾಘವೇಂದ್ರರವರು ಲೋಕಸಭೆಯಲ್ಲಿ ಇದೇ ಕಾನೂನು ತಿದ್ದಪಡಿ ಬಗ್ಗೆ ಆಗ್ರಹಿಸಿದ್ದಾರೆ.
ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಭೆ ಕರೆದು ಈಗಾಗಲೇ ಸಾಗರ ಮತ್ತು ಶಿವಮೊಗ್ಗ ಉಪವಿಭಾಗಾಧಿಕಾರಿಗಳು 1930 ರ ಹಿಂದಿನ ಅನುಭವದ ದಾಖಲೆಗಳು 15 ದಿಗಳ ಒಳಗಾಗಿ ಹಾಜರುಪಡಿಸದಿದ್ದರೆ ಅರ್ಜಿ ವಜಾ ಮಾಡುವುದಾಗಿ ನೋಟೀಸ್ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಸುಪ್ರೀಂ ಕೋರ್ಟ್ ಅರಣ್ಯ ಭೂಮಿ ಸಾಗುವಳಿದಾರರಿಗೆ ನೈಸರ್ಗಿಕ ನ್ಯಾಯ ನಿಯಮಗಳನ್ನು ಪಾಲಿಸಿ ಸಹಾಯ ಮಾಡಿ ದಾಖಲೆಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ಸಹಾಯ ಮಾಡಬೇಕಾಗಿದೆ. ಆದರೆ ಯಾವೊಬ್ಬ ಅಧಿಕಾರಿಗಳು ಈ ನಿಯಮ ಪಾಲಿಸುತ್ತಿಲ್ಲ ಎಂದು ದೂರಿದರು. ಒಮ್ಮೆ ಉಪವಿಭಾಗಾಧಿಕಾರಿ ಅರ್ಜಿ ವಜಾ ಮಾಡಿದರೆ ಜಿಲ್ಲಾಧಿಕಾರಿಯವರಲ್ಲಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
ಮುಂದೆ ಹೈಕೋರ್ಟ್ಗೂ ಹೋಗಬೇಕಾಗುತ್ತದೆ. ಜನ ಬೀದಿ ಪಾಲಾಗುತ್ತಾರೆ. ಅದ್ದರಿಂದ ಕಾನೂನು ತಿದ್ದುಪಡಿ ಆಗುವವರೆಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್, ಪರಶುರಾಮ ಶೆಟ್ಟಿಹಳ್ಳಿ, ವೀರೇಶಪ್ಪ, ಮಹಾದೇವಪ್ಪ, ನಾಗರಾಜ್, ಚನ್ನವೀರಪ್ಪ, ದೇವಮ್ಮ, ಹಾಲಪ್ಪ, ಕೃಷ್ಣಪ್ಪ ಸೇರಿದಂತೆ ನೂರಾರೂ ರೈತರು ಭಾಗವಹಿಸಿದ್ದರು. ಬಾಕ್ಸ್:ಮುಖ್ಯಮಂತ್ರಿ ಅವರು ಕಾನೂನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದು ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರು ಕಾನೂನು ತಿದ್ದುಪಡಿ ಮಾಡುವಂತೆ ಲೋಕಸಭೆಯಲ್ಲಿ ಒತ್ತಾಯಿಸಿರುವುದರಿಂದ ಅಧಿಕಾರಿಗಳು ರೈತರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸುವುದಾಗಿ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.