ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ದೃಢ ಸಂಕಲ್ಪ ಮಾಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.ಕಾಂಗ್ರೆಸ್ ದೇಶದ ದೃಢತೆಗಾಗಿ, ಅಭಿವೃದ್ಧಿಗಾಗಿ, ಜಾತ್ಯತೀತ ನಿಷ್ಠೆಯಿಂದ ಕೆಲಸ ಮಾಡುತ್ತಾ ಬಂದಿದೆ. ಸ್ವಾತಂತ್ರ್ಯದ ನಂತರ ಇಡೀ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದು, ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ನಡೆದಿದೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಎಲ್ಲಾ ಬಡವರಿಗೂ ಸೂರು ನೀಡುವಲ್ಲಿ ದೃಢ ಹೆಜ್ಜೆ ಇಟ್ಟಿದೆ. ಹಾಗಾಗಿ ಇಂದಿಗೂ ಕಾಂಗ್ರೆಸ್ ಜನರ ಮಾನಸದಲ್ಲಿ ಉಳಿದುಕೊಂಡಿದೆ ಎಂದರು.
ಪ್ರತಿಜ್ಞಾವಿಧಿಯಲ್ಲಿ ಸಾಮೂಹಿಕ ಪ್ರತಿಜ್ಞೆ ಮಾಡಿದ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ನಿಷ್ಟಾವಂತನಾಗಿರುತ್ತೇನೆ. ಸಮಾಜದಲ್ಲಿ ಸೌಹಾರ್ದತೆ ಮೂಡಿಸುತ್ತೇನೆ. ಸಾಮಾಜಿಕ ನ್ಯಾಯ ಜಾರಿಗೆ ತರಲು ಸತತವಾಗಿ ಶ್ರಮಿಸುತ್ತೇನೆ. ಪಕ್ಷ ಒಪ್ಪಿಸಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರಿತ ಪಕ್ಷವನ್ನಾಗಿ ಪರಿವರ್ತಿಸಲು ಶಕ್ತಿ ಮೀರಿ ದುಡಿಯುತ್ತೇನೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ದೃಢ ಸಂಕಲ್ಪ ಮಾಡುತ್ತೇನೆ ಎಂದು ಪ್ರತಿಜ್ಞೆ ಕೈಗೊಂಡರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ರಾಮೇಗೌಡ, ಚಂದ್ರಭೂಪಾಲ್, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಪಲ್ಲವಿ, ನಾಜೀಮಾ, ಪ್ರೇಮಾ, ಕಲಗೋಡು ರತ್ನಾಕರ್, ಇಕ್ಕೇರಿ ರಮೇಶ್, ಸುವರ್ಣಾ ನಾಗರಾಜ್, ವಿಜಯಲಕ್ಷ್ಮಿ ಪಾಟೀಲ್ ಮೊದಲಾದವರಿದ್ದರು