ನಮ್ಮ ಜಾನಪದ ಕಲೆಗಳು ಮತ್ತು ಸಾಹಿತ್ಯ ಇಂದು ಆಧುನಿಕ ಜೀವನದ ಭರಾಟೆಯಲ್ಲಿ ನಶಿಸಿ ಹೋಗಲು ಅವಕಾಶ ಮಾಡಿಕೊಡಬಾರದು. ಅದಕ್ಕಾಗಿ ಗಮಕ, ಜಾನಪದ ಕಲೆಗಳನ್ನು ಶಾಲೆಗಳಲ್ಲಿ ಪುನರುಜ್ಜೀವಗೊಳಿಸುವ ಅವಶ್ಯಕತೆ ಕಂಡು ಇಂದು ವನಿತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಆಯೋಜಿಸಿರುವುದು ಸಮಯೋಚಿತವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಛೇಂಬರ್ಸ್ ನ ಸಹಕಾರ್ಯದರ್ಶಿ ಜಿ.ವಿಜಯ ಕುಮಾರ್ ತಿಳಿಸಿದ್ದಾರೆ. ಅವರು ವನಿತಾ ಪ್ರೌಢಶಾಲೆ ಯಲ್ಲಿ
ಪಠ್ಯ ಅಧಾರಿತ ಗಮಕ ವಾಚನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ,ಉದ್ಘಾಟಿಸಿ ಮಾತನಾಡುತ್ತಿದ್ದರು.
ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ ಬರುವ ಕುಮಾರವ್ಯಾಸ ಭಾರತದ ಕೆಲ ಪದ್ಯಗಳನ್ನು ಸುಶ್ರಾವ್ಯವಾಗಿ ಶ್ರೀಮತಿ ಮಾನಸ ಶಿವರಾಮಕೃಷ್ಣನ್ ಅವರು ಹಾಡಿದರು. ಅದಕ್ಕೆ ಸೂಕ್ತವಾದ ವ್ಯಾಖ್ಯಾನವನ್ನು ರಾಮ ಸುಬ್ರಾಯ ಶೇಟ್ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಲಾವಿದರೆಲ್ಲರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ ರಾಜ್ ವಹಿಸಿದ್ದರು. ಎಲ್ಲ ಶಿಕ್ಷಕರು ಮತ್ತು ಮಕ್ಕಳು ಆಸಕ್ತಿಯಿಂದ ಭಾಗವಹಿಸಿದ್ದರು.