ಶಿಕ್ಷಣವೆಂದರೆ ತಿಳಿಯದ,ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಪ್ರಥಮ ಮಹಿಳೆ, ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ, ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದಣಿವರಿಯದ ಸತ್ಯಶೋಧಕಿ,ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ.
ಸಾವಿತ್ರಿಬಾಯಿ ಯವರು ಮಹಾರಾಷ್ಟ್ರದ ಸತಾರ ಜಿಲ್ಲೆಯ ಖಂಡಾಲ ತಾಲೂಕಿನ ಒಂದು ಪುಟ್ಟ ಹಳ್ಳಿಯಾದ ನೈಗಾವ್ ನಲ್ಲಿ ಕ್ರಿ.ಶ.1831 ಜನವರಿ 3 ರಂದು ಜನಿಸಿದರು.ಅವರ ತಂದೆ ಖಂಡೋಜಿ ನೇವಸೆ ಪಾಟೀಲ್ ಹಾಗೂ ತಾಯಿ ಲಕ್ಷ್ಮೀಬಾಯಿ.

ಬಾಲ್ಯದಿಂದಲೇ ಸಾವಿತ್ರಿಬಾಯಿ ಯವರು ಚುರುಕು ಹಾಗೂ ಧೈರ್ಯವಂತೆಯಾಗಿದ್ದರು.ಜ್ಯೋತಿ ಬಾ ಫುಲೆಯೊಂದಿಗೆ ವಿವಾಹವಾದಾಗ ಸಾವಿತ್ರಿಬಾಯಿಗೆ 13 ವರ್ಷ.ಸಾವಿತ್ರಿ ಬಾ ಫುಲೆಯವರ ಯಶಸ್ಸು, ಶ್ರೇಯಸ್ಸಿನ ಸಿಂಹಪಾಲು ಜ್ಯೋತಿ ಬಾ ಫುಲೆ ಅವರಿಗೆ ಸಲ್ಲುತ್ತದೆ.ಸ್ತ್ರೀ ಶಿಕ್ಷಣವನ್ನು ಆರಂಭಿಸಿದ ಕೀರ್ತಿ ಜ್ಯೋತಿ ಬಾ ಫುಲೆ ಅವರಿಗೆ ಸಲ್ಲುತ್ತದೆ.

ಸಾವಿತ್ರಿಬಾಯಿಯವರ ಶಿಕ್ಷಣದ ಕನಸನ್ನು ಅರಿತಂತಹ ಜ್ಯೋತಿಬಾಫುಲೆ ಅವರು,ಸಾವಿತ್ರಿಬಾಯಿ ರವರಿಗೆ ಧೈರ್ಯ ತುಂಬಿ ಅವರ ಶಿಕ್ಷಣಕ್ಕೆ ಉತ್ತೇಜನವನ್ನು ನೀಡಿದರು.ಇದರಿಂದಾಗಿ ಮನೆಯೇ ಮೊದಲ ಪಾಠಶಾಲೆ, ಪತಿಯೇ ಮೊದಲ ಗುರುವಾದರು.ಫುಲೆಯವರು ತನ್ನ ಪತ್ನಿಯನ್ನು ವಿದ್ಯಾವಂತಳನ್ನಾಗಿ ಮಾಡಿ ಅಪಾರವಾದ ಆತ್ಮಾಭಿಮಾನಿಯನ್ನಾಗಿಯೂ, ಸ್ವಶಕ್ತಿಯುಳ್ಳ ಮಹಿಳೆಯನ್ನಾಗಿ ಪರಿವರ್ತಿಸಿದರು.ಅಸ್ಪೃಶ್ಯ ತಳಸಮುದಾಯದ ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಬೇಕೆಂಬ ದೃಢ ಹಂಬಲದಿಂದ ಸಾವಿತ್ರಿಬಾಯಿಯವರಿಗೆ ಕ್ರಿ.ಶ.1847 ರಲ್ಲಿ ಮಿಚೆಲ್ ಅವರ ಸಾಮಾನ್ಯ ಶಾಲೆಯಲ್ಲಿ ಶಿಕ್ಷಕಿಯರ ತರಬೇಯಿತಿಯನ್ನು ಕೊಡಿಸಿದರು.ಇದರಿಂದಾಗಿ ಮಹಾರಾಷ್ಟ್ರ ದಲ್ಲಿ ತಭೇಟಿಯನ್ನು ಪಡೆದ ಮೊದಲ ಮಹಿಳಾ ಶಿಕ್ಷಕಿಯಾದರು.
ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆ ಅಪಾರ.ಸ್ವಾತಂತ್ಯ ಸಂಗ್ರಾಮಕ್ಕೂ ಮೊದಲೇ ಭಾರತೀಯರು ದಾಸ್ಯದ ಸಂಕೋಲೆಯಿಂದ ನರಳುತ್ತಿದ್ದ ಸಮಯದಲ್ಲಿ ಬ್ರಿಟಿಷರ ಶಿಕ್ಷಣ ನೀತಿಯಲ್ಲಿನ ದೋಷಗಳ ಬಗ್ಗೆ ಅರಿವನ್ನು ಹೊಂದಿದ್ದರು.ಸ್ತ್ರೀಯೊಬ್ಬಳು ಸುಶಿಕ್ಷಿತಳಾಗುವುದು ಧರ್ಮಕ್ಕೂ,ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಬಲವಾಗಿ ನಂಬಿದ್ದ ಕಾಲದಲ್ಲಿ ಕ್ರಿ.ಶ.1848 ರಲ್ಲಿ ಪುಣೆಯ ಭುಧವಾರಪೇಟೆಯ ಬಿಢೆ ಯವರ ಮನೆಯಲ್ಲಿ ಹೆಣ್ಣುಮಕ್ಕಳಿಗಾಗಿ ಕನ್ಯಾಶಾಲೆಯನ್ನು ತೆರೆದರು.

ಕ್ರಿ.ಶ.1848 ರಿಂದ 1852 ರ ಅವಧಿಯಲ್ಲಿ 18 ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು.ಈ ಎಲ್ಲಾ ಶಾಲೆಗಳ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸುವ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಎಲ್ಲವೂ ಸಾವಿತ್ರಿಬಾಯಿಯವರೇ ಆಗಿ ಎಲ್ಲವನ್ನು ಯಶಸ್ವಿಯಾಗಿ ನಿರ್ವಹಿಸಿದರು.ಒಂದು ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷನಿದ್ದು, ಜ್ಯೋತಿ ಬಾ ಫುಲೆಯವರು ತಮ್ಮ ಪತ್ನಿಗೆ ನೀಡಿದ ಸಹಕಾರ ಅವಿಸ್ಮರಣಿಯವಾದದ್ದು.

ಸಮಾಜದಲ್ಲಿ ತುಂಬಿದ್ದ ಮುಢನಂಬಿಕೆಗಳು, ಜಾತಿವ್ಯವಸ್ಥೆ, ಸತಿಸಹಗಮನ ಪದ್ದತಿ, ಅಸ್ಪೃಶ್ಯತೆ ಎಲ್ಲವುಗಳಿಂದ ನೊಂದಿದ್ದ ದಂಪತಿಗಳು ಶಿಕ್ಷಣದ ಮೂಲಕ ಎಲ್ಲವನ್ನು ಮೆಟ್ಟಿನಿಲ್ಲಬಹುದು.ಹಾಗೆಯೇ ಶಿಕ್ಷಣ ಹಾಗೂ ಜ್ಞಾನ, ವ್ಯಕ್ತಿಯನ್ನು ವೈಯಕ್ತಿಕವಾಗಿ ಉನ್ನತಿಗೇರಿಸುತ್ತದೆ ಎಂಬುದನ್ನು ದೃಢವಾಗಿ ನಂಬಿದ್ದರು.ಅಂದಿನ ಕಾಲದಲ್ಲಿ ಶಾಲೆಗಳನ್ನು ತೆರೆಯುವುದು ಹಾಗೂ ಅವುಗಳನ್ನು ನಿರ್ವಹಿಸುವುದು ಸುಲಭದ ಮಾರ್ಗವಾಗಿರಲಿಲ್ಲ.ಸಾಮಾಜಿಕವಾಗಿ, ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸಬೇಕಾಗಿತ್ತು.ಸಮಾಜದ ಪರಿವರ್ತನೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಅಚಲವಾದ ವಿಶ್ವಾಸವನ್ನು ಹೊಂದಿದ್ದಂತಹ ದಂಪತಿಗಳು ಶಿಕ್ಷಣದ ಮಹತ್ವವನ್ನು ಸ್ವಾತಂತ್ರ್ಯ ಪೂರ್ವ ಕಾಲದಲ್ಲೇ ನಿರೂಪಿಸಿದ ಮಹಾನ್ ಚೇತನಗಳಾಗಿದ್ದರು.ಸಮಾಜದ ಕಟ್ಟುಪಾಡುಗಳಿಗೆ ಹೆದರಿದ ಹೆಣ್ಣು ಮಕ್ಕಳು ಶಾಲೆಗಳಿಗೆ ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಸ್ವತಃ ಸಾವಿತ್ರಿಬಾಯಿಯವರೆ ಕೇರಿಯಲ್ಲಿನ ಮನೆ ಮನೆಗಳ8ಗು ಭೇಟಿ ನೀಡಿ ಪಾಠ ಹೇಳಿಕೊಡುವುದರ ಜೊತೆಗೆ, ಅವರಿಗೆ ಧೈರ್ಯ ತುಂಬಿ ಶಿಕ್ಷಣದ ಮಹತ್ವವನ್ನು ತಿಳಿಸಿ, ಮರಳಿ ಶಾಲೆಗೆ ಬರುವಂತೆ ಪ್ರೇರಣೆಯನ್ನು ನೀಡಿದರು.ವಿಧವೆಯರ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಮಹಿಳೆಯರಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕ್ರಿ.ಶ.1852 ರಲ್ಲಿ ಮಹಿಳಾ ಸೇವಾಮಂಡಳಿಯನ್ನು ಸ್ಥಾಪಿಸಿ ಆ ಮೂಲಕ ಸಾವಿತ್ರಿಬಾಯಿ ಯವರು ಜಾಗೃತಿಯನ್ನು ಮೂಡಿಸುತ್ತಿದ್ದರು.ಅನಾಥ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ಹಾಗೂ ವಸತಿ ಶಾಲೆಗಳನ್ನು ತೆರೆದರು.ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಶೋಷಿತರಾದ ಎಲ್ಲರನ್ನು ಒಟ್ಟುಗೂಡಿಸಿ ಅವರ ಹಕ್ಕುಗಳನ್ನು ತಿಳಿಸಿ ಮಾನಸಿಕವಾಗಿ ಹಾಗೂ ಧಾರ್ಮಿಕವಾಗಿ ಗುಲಾಮಗಿರಿಯಿಂದ ಮುಕ್ತಿಕೋಳಿಸಲು ಶ್ರಮಿಸಿದರು.

ಪ್ರಾರಂಭದಲ್ಲಿ ಶಾಲೆಗೆ ಹೊರಟಾಗ ಅವರು ಅನುಭವಿಸಿದ ಅವಮಾನಗಳನ್ನು ಪುರಸ್ಕಾರಗಳೆಂದು ಭಾವಿಸಿ, ದೃತಿಗೆಡದೆ ಪ್ರಯತ್ನ ಬಿಡದೇ ಯಶಸ್ಸಿನ ಉತ್ತುಂಗ ಶಿಖರವನ್ನೇರಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ.ಸ್ವಾತಂತ್ರ್ಯ ಪೂರ್ವದಲ್ಲೇ ಶಿಕ್ಷಣದಲ್ಲಿ ವೈವಿಧ್ಯತೆಯನ್ನು ತಂದಂತಹ ಸಾವಿತ್ರಿಬಾಯಿ ಫುಲೆ ಅವರ ಚಿಂತನೆ ಶ್ಲಾಘನೀಯವಾದದ್ದು.ಸಮಾಜ ಸುಧಾರಕಿಯಾಗಿದ್ದ ಸಾವಿತ್ರಿಬಾಯಿ ಫುಲೆರವರು ತಮ್ಮ ಜೀವನದ ಅಮೂಲ್ಯವಾದ ಪ್ರತಿಯೊಂದು ಕ್ಷಣವನ್ನು ಸಮಾಜದ ಸೇವೆಗಾಗಿ ಮೂಡುಪಾಗಿಟ್ಟಿದ್ದರು.ಕ್ರಿ.ಶ.1897 ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಗ ಸ್ವತಃ ಕಾಯಿಲೆಗೆ ತುತ್ತಾಗಿ ಕೊನೆಯುಸಿರೆಳೆದರು. ತಮ್ಮ ನಿಸ್ವಾರ್ಥ ಸೇವೆಯಿಂದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದರು.

ಅಕ್ಷರದವ್ವ ಅವ್ವ ಎಂದು ಪ್ರಸಿದ್ಧರಾದ ಸಾವಿತ್ರಿಬಾಯಿ ಯವರು ಸ್ವತ ಲೇಖಕಿಯಾಗಿದ್ದು,ಕಾವ್ಯಫುಲೆ,ಕವನ ಸಂಕಲನ ವನ್ನು, ಭವನಕಾಶಿ ಸುಬೋಧ ರತ್ನಾಕರ್ ಎಂಬ ಆತ್ಮಕಥೆಯನ್ನು, ಜ್ಯೋತಿಬಾಫುಲೆ ರವರ ಭಾಷಣಗಳ ಸಂಪಾದಿತ ಕೃತಿಯನ್ನು “ಕರ್ಜಿ” ಎಂಬ ಸಾಮಾಜಿಕ ಕಳಕಳಿಯ ಪ್ರಬಂಧವನ್ನು ರಚಿಸಿದ್ದರು.

ಇತಿಹಾಸದಲ್ಲಿ ಭಾರತದ ಮೊದಲ ಮಹಿಳಾಶಿಕ್ಷಕಿಯಾಗಿ ಜನಪ್ರಿಯತೆಯನ್ನು ಪಡೆದ ಸಾವಿತ್ರಿಬಾಯಿ ಫುಲೆ ರವರು ಅಪ್ಪಟ ಸ್ತ್ರೀವಾದಿಯಾಗಿದ್ದರು.ಇವರ ಎಲ್ಲಾ ಸಾಧನೆಗಳನ್ನು ಪರಿಗಣಿಸಿದ ಬ್ರಿಟಿಷ್ ಸರ್ಕಾರ ಇವರಿಗೆ “ಇಂಡಿಯನ್ ಫಸ್ಟ್ ಲೇಡಿ ಟೀಚರ್” ಎಂಬ ಬಿರುದನ್ನು ಕೊಟ್ಟಿತು.ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೇ, ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.ಸ್ತ್ರೀ ವಿಮೋಚನೆಯ ಕನಸನ್ನು ಕಂಡು ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಅಪಾರ ಕೊಡುಗೆಯನ್ನು ನೀಡಿದಂತಹ ಸಾವಿತ್ರಿಬಾಯಿ ಫುಲೆ ರವರಿಗೆ ಭಾರತದ ಇತಿಹಾಸದಲ್ಲಿ ಅಗ್ರಸ್ಥಾನ ಸಲ್ಲುತ್ತದೆ.
ಮಾತೆ ಸಾವಿತ್ರಿಬಾಯಿ ಫುಲೆ ರವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ ಕೊಡುಗೆ, ಅವರ ಪರಿಶ್ರಮದಿಂದ ಇಂದಿನ 21 ನೇ ಶತಮಾನದಲ್ಲಿ ಹೆಣ್ಣುಮಕ್ಕಳು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ.ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಾ,ಅವರಿಗೆ ಗೌರವಪೂರ್ವಕ ನುಡಿನಮನಗಳು.

*ಶ್ರೀಮತಿ. ಅನಿತಕೃಷ್ಣ* *ಸಹಶಿಕ್ಷಕಿ.ತೀರ್ಥಹಳ್ಳಿ*