ಶಿವಮೊಗ್ಗ: ಸ್ಮಾರ್ಟ್ ಸಿಟಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಜಾತ್ಯತೀತ ಜನತಾದಳ ಕಾರ್ಮಿಕ ವಿಭಾಗ ವತಿಯಿಂದ ಇಂದು ನಗರದ ಸ್ಮಾರ್ಟ್ ಸಿಟಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಅನುದಾನದ ಅಡಿಯಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ.

ನಗರದ ಬಹುತೇಕ ಕಡೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದರಿಂದ ನಾಗರಿಕರಿಗೆ, ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರದ ಹೃದಯ ಭಾಗದಲ್ಲಿರುವ ದುರ್ಗಿಗುಡಿ, ಹೊಸಮನೆ, ಶರಾವತಿ ನಗರ, ಜೈಲ್ ರಸ್ತೆ ಮುಂತಾದ ಕಡೆಗಳಲ್ಲಿ ಕಾಮಗಾರಿ ನಡೆಸುತ್ತಿರುವ ಇಲಾಖೆಗಳ ನಡುವೆ ಸಮನ್ವಯ ಕೊರತೆ ಇದೆ. ಜಲಮಂಡಳಿ, ರಸ್ತೆ ಕಾಮಗಾರಿ, ಒಳ ಚರಂಡಿ, ವಿದ್ಯುತ್ ಚ್ಛಕ್ತಿ ಮಂಡಳಿಯವರ ನಡುವೆ ಸಮನ್ವಯ ಇಲ್ಲವಾಗಿದೆ. ಇದರಿಂದ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದ್ದು, ನೂರಾರು ಕೋಟಿ ರೂ. ಜನರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು.

ಈ ಕೂಡಲೇ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ತೊಡಗಿರುವ ಸಂಬಂಧಿಸಿದ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜನರ ತೆರಿಗೆ ಹಣ ಪೋಲಾಗುತ್ತಿರುವುದನ್ನು ತಡೆಯಬೇಕೆಂದು ಒತ್ತಾಯಿಸಿದ ಮನವಿಯನ್ನು ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಮು ಡಿ., ನರಸಿಂಹ ಗಂಧದಮನೆ, ಹೆಚ್. ಪಾಲಾಕ್ಷಿ. ನಾಗರಾಜ ಕಂಕಾರಿ, ಎಸ್. ಬಸವರಾಜ, ಪರಶುರಾಂ ಬಿ., ಮಂಜುನಾಥ ನವುಲೆ, ಎಂ. ರಾಜಣ್ಣ, ದಿನೇಶ್, ಎಂ. ಮಂಜುನಾಥ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…