ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಮಾನ್ಯ(10 ವರ್ಷ) ಹೆಸರಿನ ಹೆಣ್ಣು ಸಿಂಹ ಜನವರಿ 31 ರಂದು ಮೃತಪಟ್ಟಿದೆ.ಗಂಡು ಸಿಂಹದೊಂದಿಗೆ ಮಿಲನಕ್ಕೆ ಬಿಟ್ಟಾಗ ಪರಸ್ಪರ ಸಂಘರ್ಷಕ್ಕಿಳಿದ ಸಿಂಹಗಳು ಕಾದಾಟಕ್ಕೆ ಇಳಿದಿವೆ. ಮಾನ್ಯ ಸಿಂಹ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದೆ. ಇದರಿಂದಾಗಿ ಶಿವಮೊಗ್ಗದ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ 5 ಕ್ಕೆ ಕುಸಿದಿದೆ. 2011 ರಲ್ಲಿ ಮೈಸೂರು ಮೃಗಾಲಯದಿಂದ ಬಂದ ಆರ್ಯ, ಮಾಲಿನಿ, ಮಾನ್ಯ ಮೂರು ಸಿಂಹಗಳ ಪೈಕಿ, ಆರ್ಯ ಹೊರತುಪಡಿಸಿ ಎರಡು ಸಿಂಹಿಣಿಗಳು ಅಸು ನೀಗಿವೆ.

ಮೂರು ಗಂಡು ಮೂರು ಹೆಣ್ಣು ಸಿಂಹಗಳಿದ್ದ ಸಫಾರಿಯಲ್ಲೀಗ ಸಿಂಹಗಳ ಸಂಖ್ಯೆ ಐದಕ್ಕೆ ಕುಸಿದಿದೆ.ಒಂದು ವಾರದ ಹಿಂದೆ ಯಶವಂತ್ ಮತ್ತು ಮಾನ್ಯ ಕಾದಾಡಿಕೊಂಡಿವೆ. ಈ ರೀತಿ ಕಾದಾಟ ಸರ್ವೇ ಸಾಮಾನ್ಯ. ಕಾದಾಟ ನಡೆದಾಗ ಸಿಂಹಗಳನ್ನು ಪ್ರತ್ಯೇಕಿಸಿ ಇಡಲಾಗುತ್ತದೆ. ಮಾನ್ಯ ಸಿಂಹಿಣಿಗೆ ಜಗಳದ ಸಂದರ್ಭದಲ್ಲಿ ತೀವ್ರತರ ಗಾಯವಾಗಿದ್ದರಿಂದ ಗುಣವಾಗದ ಕಾರಣ ಅಸು ನೀಗಿದೆ ಎಂದು ಹುಲಿ ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಲ್ ಚಂದ್ ತಿಳಿಸಿದ್ದಾರೆ.ಮೃತಪಟ್ಟ ಮಾನ್ಯ ಹೆಣ್ಣು ಸಿಂಹದ ಬಗ್ಗೆ ಕಾನೂನು ರೀತಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಸಿಂಹಿಣಿ ಮೃತದೇಹ ವಿಲೇ ಮಾಡಲಾಗಿದೆ ಅವರು ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…