ಶಿವಮೊಗ್ಗ: ಚಾರಣ ಮಾಡುವುದರಿಂದ ದೇಶದ ಪ್ರಾಕೃತಿಕ ಸೊಬಗಿನ ಪರಿಚಯ ಆಗುವುದರ ಜತೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜೀವನಶೈಲಿ ಹಾಗೂ ಸಾಂಸ್ಕೃತಿಕ ಶ್ರೇಷ್ಠತೆಯ ಪರಿಚಯವಾಗುತ್ತದೆ ಎಂದು ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ವಾಸವಿ ಟ್ರಸ್ಟ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಚಂದ್ರಕಣಿ ಪಾಸ್‌ಗೆ ತೆರಳುತ್ತಿರುವ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಕೃತಿ ಅಧ್ಯಯನಕ್ಕೆ ಹಿಮಾಲಯ ಉತ್ತಮ ಪ್ರದೇಶವಾಗಿದ್ದು, ಚಿಕ್ಕ ವಯಸ್ಸಿನಲ್ಲೆ ಪ್ರಕೃತಿ ಅಧ್ಯಯನಕ್ಕೆ ಹೊರಟ ಮಕ್ಕಳಿಗೆ ಅತ್ಯುತ್ತಮ ಅನುಭವ ದೊರಕಲಿದೆ. ವಾಸವಿ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕಳಿಸುತ್ತಿರುವ ಪಾಲಕರಿಗೆ ಭಯ ಸಹಜ. ಪ್ರವಾಸದ ಮುಂದಾಳತ್ವ ವಹಿಸಿಕೊಂಡಿರುವವರ ಮಾತನ್ನು ಮಕ್ಕಳು ಚಾಚು ತಪ್ಪದೆ ಕೇಳಬೇಕು. ಈ ಮೂಲಕ ಸುಂದರವಾದ ಹಿಮಾಲಯದಲ್ಲಿ ಚಾರಣ ಮಾಡಿ, ವಿವಿಧ ಹವಾಗುಣವನ್ನು ಒಂದೇ ದಿನದಲ್ಲಿ ನೋಡಬಹುದು. ಅಲ್ಲಿಯ ನಾಗರೀಕರ ಜೀವನ ಮತ್ತು ಪ್ರಕೃತಿಯ ಅಧ್ಯಯನಕ್ಕೆ ಅತ್ಯುತ್ತಮ ಅವಕಾಶ ಒದಗಿಬಂದಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
51 ಮಕ್ಕಳನ್ನು ಕರೆದುಕೊಂಡು ಹೊರಟ ಅ.ನಾ.ವಿಜಯೇಂದ್ರ, ಬಾಯರಿ, ರೇಖಾ ಮತ್ತು ಆಶಾ ಅವರನ್ನು ಹಾಗೂ ಹದಿನೈದು ದಿನದಿಂದ ಮಕ್ಕಳಿಗೆ ವ್ಯಾಯಾಮ ಹೇಳಿಕೊಟ್ಟ ದೊರೈ, ಸುರೇಶ್, ಹರೀಶ್ ಪಂಡಿತ್, ಮನೋಹರ್ ಅವರನ್ನು ಗೌರವಿಸಲಾಯಿತು.
ವಾಗೇಶ್ ಮಾತನಾಡಿ, ಪಾಲಕರು ಸಂಯಮದಿAದ ವರ್ತಿಸಬೇಕು. ಮಕ್ಕಳನ್ನು ಬಿಟ್ಟಿರುವುದು ಕಷ್ಟ ಆಗಬಹುದು. ಆದರೆ ಸಾಹಸ ಚಾರಣಕ್ಕೆ ಅಣಿಯಾಗಿದ್ದಾರೆ. ಅವರಿಗೆ ಧೈರ್ಯ ತುಂಬಿ ಕಳುಹಿಸಬೇಕು ಎಂದು ಹೇಳಿದರು.
ವೈಎಚ್‌ಎಐ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂತೃಪ್ತಿಯ ಜೀವನ ಸಾಗಿಸುತ್ತಿರುವ ಮಕ್ಕಳು ಜನಸಾಮಾನ್ಯರಂತೆ ಬದುಕುವುದನ್ನು ಕಲಿಯಲು ಇದು ಉತ್ತಮ ಅವಕಾಶ. ಮುಂದೆ ಉತ್ತಮ ಪ್ರಜೆಗಳಾಗಲು ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.
ಮಕ್ಕಳ ಪಾಲಕರು, ಹಿತೈಷಿಗಳು, ಪ್ರಮುಖರಾದ ಡಾ. ಪ್ರಕೃತಿ, ಮನಮೋಹನ ಪವಾರ್, ಪ್ರವೀಣ್, ವಾಸವಿ ಶಾಲಾ ಸಿಬ್ಬಂದಿ ಮಕ್ಕಳಿಗೆ ಹೂ ನೀಡಿ ಶುಭಹಾರೈಸಿ ಕಳುಹಿಸಿಕೊಟ್ಟರು. ಅನೇಕ ಪಾಲಕರು ಸಂತಸಪಟ್ಟರು.
ಶಿವಮೊಗ್ಗ ಘಟಕದ ಅಧ್ಯಕ್ಷ ಸುನಿಲ್, ನಿರ್ದೇಶಕ ಬದರಿನಾಥ್, ದಯಾನಂದ ಅಕ್ಕಸಾಲಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್ ಉಪಸ್ಥಿತರಿದ್ದರು.