ಶಿವಮೊಗ್ಗದಲ್ಲಿ 3 ದಿನಗಳ ಕಾಲ “ದೇಸಿ ಮೇಳ-ಪರಂಪರೆ” ಕಾರ್ಯಕ್ರಮ
ಸ್ವದೇಶೀ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ…

ಶಿವಮೊಗ್ಗ : ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ, ಶಿವಮೊಗ್ಗ ನಗರವು ಒಂದು ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ ಸ್ಥಳೀಯ ಮಾರಾಟಗಾರರಿಗೆ ಮತ್ತು ಸ್ವದೇಶೀ ಉತ್ಪನ್ನಗಳಿಗೆ ಒಂದು ವೇದಿಕೆ ಕಲ್ಪಿಸುವ ಸಲುವಾಗಿ ಶಿವಮೊಗ್ಗ ನಗರದ ಪ್ರತಿಷ್ಠಿತ ಬಂಟರ ಭವನದಲ್ಲಿ ಡಿ.12,13,14 ರಂದು 3ದಿನಗಳ ಕಾಲ “ದೇಸಿ ಮೇಳ – ಪರಂಪರೆ” ಎಂಬ ಶೀರ್ಷಿಕೆಯಡಿಯಲ್ಲಿ ಸ್ವದೇಶೀ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿವಮೊಗ್ಗದ ಜನತೆಗೆ ವಿಶಿಷ್ಟ ಮತ್ತು ಗುಣಮಟ್ಟದ ಸ್ವದೇಶಿ ಉತ್ಪನ್ನಗಳನ್ನು ಒಂದೇ ಸೂರಿನಡಿ ಖರೀದಿಸುವ ಸುವರ್ಣಾವಕಾಶ ಇದಾಗಿದೆ.

ಈ “ದೇಸಿ ಮೇಳ-ಪರಂಪರೆ” ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಬಗೆ ಬಗೆಯ ಗೃಹ ಉತ್ಪನ್ನಗಳು, ಕೈಮಗ್ಗದ ಸೀರೆಗಳು, ಮಣ್ಣಿನ ಉತ್ಪನ್ನಗಳು, ಖಾದಿ ಉತ್ಪನ್ನಗಳು , ಖಾದ್ಯ ಉತ್ಪನ್ನಗಳು, ಹ್ಯಾಂಡ್ ಮೇಡ್ ಹಾಸಿಗೆ ಮತ್ತು ಹೊದಿಕೆಗಳು, ಅಲಂಕಾರಿಕ ವಸ್ತುಗಳು, ಹ್ಯಾಂಡ್ ಮೇಡ್ ಆಭರಣಗಳು ಆಕರ್ಷಕ ಸ್ವದೇಶಿ ಉತ್ಪನ್ನಗಳು ಮತ್ತು ದೇಸಿ ಆಹಾರ ಪದಾರ್ಥಗಳು ಲಭ್ಯವಿರಲಿದ್ದು. ಸ್ಥಳೀಯ ಮಾರಾಟಗಾರರಿಗೆ ಮತ್ತು ಕರಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಲು, ಮಾರಾಟ ಮಾಡಲು ಮತ್ತು ಮಾರುಕಟ್ಟೆ ವಿಸ್ತರಿಸಲು ಈ ದೇಸಿ ಮೇಳ – ಪರಂಪರೆ ಒಂದು ಉತ್ತಮ ವೇದಿಕೆಯಾಗಲಿದೆ.

‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗೆ ಅನುಗುಣವಾಗಿ, “ಸ್ವದೇಶಿ ನಮ್ಮ ಸ್ವ-ಭಾವವಾಗಬೇಕು” ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಲಾಗುತ್ತಿದೆ. ಭಾರತದಲ್ಲೇ ತಯಾರಾದ ವಸ್ತುಗಳನ್ನು ಬಳಸುವ ಮೂಲಕ ದೇಶದ ಆರ್ಥಿಕತೆಗೆ ಮತ್ತು ಸ್ಥಳೀಯ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಯುವಕರು ಹೆಚ್ಚಾಗಿ ಜಾಗತಿಕ ಬ್ರ್ಯಾಂಡ್‌ಗಳು ಮತ್ತು ವೇಗದ ಫ್ಯಾಷನ್ ಕಡೆಗೆ ಒಲವು ತೋರುತ್ತಿರುವ ಈ ಸಮಯದಲ್ಲಿ, ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಸ್ವದೇಶಿ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಮತ್ತು ಸ್ಥಾನ ದೊರಕಬೇಕು. ಈ ಕುರಿತು ಗ್ರಾಹಕರಲ್ಲಿ ಮತ್ತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಈ ಪ್ರದರ್ಶನವು ಕೇವಲ ಮಾರಾಟದ ಕೇಂದ್ರವಾಗಿರದೆ, ‘ಸ್ವದೇಶಿ ಉತ್ಪನ್ನಗಳ ಬಳಕೆಯಿಂದಾಗುವ ಪ್ರಯೋಜನಗಳು’ ಮತ್ತು ‘ಭಾರತೀಯ ಕರಕುಶಲತೆಯ ಶ್ರೀಮಂತಿಕೆ’ ಕುರಿತು ಅರಿವು ಮೂಡಿಸುವ ವೇದಿಕೆಯೂ ಆಗಿರಲಿದೆ. ಭಾರತವು ಜಾಗತಿಕ ಸೂಪರ್‌ಪವರ್ ಆಗಿ ಹೊರಹೊಮ್ಮಲು, ತನ್ನದೇ ಆದ ಉತ್ಪಾದನಾ ಸಾಮರ್ಥ್ಯವನ್ನು ಮಾರುಕಟ್ಟೆಗೆ ತೆರೆದಿಡಬೇಕು. ಶಿವಮೊಗ್ಗದ ‘ ದೇಸಿ ಮೇಳ- ಪರಂಪರೆ’ ಮೇಳವು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಇದು ಜನರನ್ನು ತಮ್ಮ ಬೇರುಗಳೊಂದಿಗೆ ಮರು-ಸಂಪರ್ಕ ಸಾಧಿಸಲು ಮತ್ತು ತಮ್ಮ ಹಣವನ್ನು ನೇರವಾಗಿ ರಾಷ್ಟ್ರ ನಿರ್ಮಾಣಕ್ಕೆ ಹೂಡಿಕೆ ಮಾಡಲು ಪ್ರೇರೇಪಿಸುತ್ತದೆ.

ಶಿವಮೊಗ್ಗದ ಸಮಸ್ತ ನಾಗರಿಕರು, ವಿದ್ಯಾರ್ಥಿಗಳು, ಉದ್ಯಮಿಗಳು, ಮತ್ತು ಪ್ರಜ್ಞಾವಂತ ಗ್ರಾಹಕರು ಈ ಮೂರು ದಿನಗಳ ‘ದೇಸಿ ಮೇಳ – ಪರಂಪರೆ’ ಮಹೋತ್ಸವಕ್ಕೆ ಭೇಟಿ ನೀಡಿ, ಇದರ ಭಾಗವಾಗಬೇಕು. ಇಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುವ ಜೊತೆಗೆ, ದೇಶದ ಕರಕುಶಲಕರ್ಮಿಗಳ ಶ್ರಮವನ್ನು ಗೌರವಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕೆಂದು ವಿನಂತಿಸುತ್ತೇವೆ.

ಪರಂಪರೆಯನ್ನು ಉಳಿಸಿ, ಸ್ವದೇಶಿತ್ವವನ್ನು ಬೆಳೆಸಿ, ‘ಆತ್ಮನಿರ್ಭರ ಭಾರತ’ದ ಕನಸಿಗೆ ಕೈಜೋಡಿಸಿ.

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಅರ್ಥಶಾಸ್ತ್ರಜ್ಞರು ಪ್ರಖರ ಪರಿಸರ ವಾದಿಗಳು ಹಾಗೂ ಸ್ವದೇಶಿ ಚಿಂತಕರಾದ ಪ್ರೊ. ಬಿ. ಎಮ್. ಕುಮಾರಸ್ವಾಮಿ, “ದೇಸಿ ಮೇಳ – ಪರಂಪರೆ” ಕಾರ್ಯಕ್ರಮದ ಆಯೋಜಕರಾದ ಜಯವರ್ಧನ ಆಚಾರ್ಯ, ದಿಲೀಪ್ ಎನ್, ಅರವಿಂದ ಎಲ್. ಜಿ. ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ

Leave a Reply

Your email address will not be published. Required fields are marked *