ಮಂಜುನಾಥ್ ಶೆಟ್ಟಿ…

ಪಟ್ಲ ಫೌಂಡೇಶನ್ ವತಿಯಿಂದ ಹೊಸನಗರದ ಗಾಯತ್ರಿ ಮಂದಿರದಲ್ಲಿ ಯಕ್ಷಗಾನ ಪ್ರಸಂಗ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಮತ್ತೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ ಬದಲಾಗಿ ಅದು ಹೃದಯವನ್ನು ಶ್ರೀಮಂತಗೊಳಿಸುತ್ತದೆ.ಆ ಮಾತಿಗೆ ಜೀವಂತ ಉದಾಹರಣೆಯಾಗಿ ಪಟ್ಲ ಸತೀಶ್ ಶೆಟ್ಟಿ ಅವರು ನಮ್ಮೆಲ್ಲರ ಎದುರು ಕಾಣಿಸುತ್ತಿದ್ದಾರೆ. ದುರ್ಬಲ ಕಲಾವಿದರ ಬದುಕಿಗೆ ಆಸರೆಯಾಗುವ ಮೂಲಕ ಅವರ ಭವಿಷ್ಯಕ್ಕೆ ಹೊಸ ದಾರಿ ತೋರಿಸುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಯಕ್ಷಗಾನದ ಪರಿಚಯ ಇರಬೇಕು. ಕಲಾವಿದರಾಗದಿದ್ದರೂ ಉತ್ತಮ ಯಕ್ಷಗಾನ ಪ್ರೇಕ್ಷಕರಾಗಬೇಕು ಎಂಬ ಉದ್ದೇಶದಿಂದ ಪಟ್ಲ ಫೌಂಡೇಶನ್ ಕಳೆದ ಹತ್ತು ವರ್ಷಗಳಿಂದ ಯಕ್ಷಕಲಾವಿದರು ಮತ್ತು ಅವರ ಕುಟುಂಬಗಳಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ರಾಷ್ಟ್ರಮಟ್ಟದಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ ಯಕ್ಷಗಾನ ಕಲೆಯನ್ನು ದೇವರಂತೆ ಪೂಜಿಸುವವರು, ಕಲಾವಿದರನ್ನು ಪ್ರೀತಿಸುವ ಅಭಿಮಾನಿಗಳು ಮತ್ತು ದಾನಿಗಳು ನಮ್ಮ ನಡುವೆ ಹಲವರಿದ್ದಾರೆ. ಆದರೆ ಸ್ವತಃ ಒಬ್ಬ ಕಲಾವಿದನಾಗಿ ಬಡ ಮತ್ತು ಅಶಕ್ತ ಕಲಾವಿದರ ಬೆಂಬಲಕ್ಕೆ ನಿಂತವರು ವಿರಳ. ಆ ವಿರಳರಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಪ್ರಮುಖರು ಎಂದು ಹೇಳಿದರು.

ಪಟ್ಲ ಫೌಂಡೇಶನ್ ಆಶ್ರಯದಲ್ಲಿ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 50ಕ್ಕೂ ಹೆಚ್ಚು ಶಾಲೆಗಳ 5,500 ವಿದ್ಯಾರ್ಥಿಗಳಿಗೆ ಉಚಿತ ಯಕ್ಷಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಎರಡು ವೇದಿಕೆಗಳಲ್ಲಿ 30ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳು ನಡೆದವು. ಜೊತೆಗೆ ಹೊಸನಗರದ ಯಕ್ಷಗಾನ ಕಲಾವಿದರಿಗೆ ನಾಲ್ಕು ಆಶ್ರಯ ಮನೆಗಳನ್ನು ನೀಡಲಾಗಿದ್ದು, ಆರ್ಥಿಕವಾಗಿ ಹಿಂದುಳಿದ 15 ಕಲಾವಿದರಿಗೆ ತಲಾ ₹30,000 ಪ್ರೋತ್ಸಾಹ ಧನ ವಿತರಿಸಲಾಗಿದೆ. 500 ಮಕ್ಕಳಿಗೆ ಒಂದು ದಿನದ ಪ್ರವಾಸವೂ ಆಯೋಜಿಸಲಾಗಿದೆ ಎಂದು ಪತ್ರಕರ್ತ ನಗರ ರಾಘವೇಂದ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಿ. ದೇವರಾಜ್, ಉದ್ಯಮಿ ಸುರೇಶ್ ಎನ್., ಡಾ. ಚೈತನ್ಯ, ದುಮ್ಮ ವಿನಯ್, ಸಾಹಿತಿ ಸುದೀಂದ್ರ ಭಂಡರಕರ್, ಪತ್ರಕರ್ತ ಸಂಘದ ಅಧ್ಯಕ್ಷ ಎಂ.ಕೆ. ವೆಂಕಟೇಶ್ ಮೂರ್ತಿ, ಗೌತಮ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *