ಮಂಜುನಾಥ್ ಶೆಟ್ಟಿ…
ದೇಶದಲ್ಲಿನ ಮಹಿಳೆಯರ ಸುರಕ್ಷತೆಗೆ ಜಾರಿಯಾಗಿರುವ ಕಾನೂನುಗಳೇ ಪ್ರಧಾನವಾಗಿ ರಕ್ಷೆಯಾಗಿದ್ದು, ಅನ್ಯ ವ್ಯವಸ್ಥೆಯಿಂದ ಮಹಿಳಾ ರಕ್ಷಣೆ ಅಸಾಧ್ಯವಾಗಿದೆ ಎಂದು ಹಿರಿಯ ಸಿವಿಲ್‌ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್‌ಎಂ.ಎಸ್.ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ವೀಕ್ಷಣಾಲಯದ ಸಭಾಂಗಣದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ಭೇಟಿ ಬಚಾವೋ.. ಭೇಟಿ ಪಡಾವೋ.. ಯೋಜನೆಯಡಿ ಬಾಲ್ಯವಿವಾಹ, ಫೋಕ್ಸೋ, ಪಿಸಿಪಿಎನ್‌ಡಿಟಿ ಕಾಯ್ದೆ ಮತ್ತು ಮಿಷನ್‌ಸುರಕ್ಷಾ ಕುರಿತು ಏರ್ಪಡಿಸಲಾಗಿದ್ದ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯೊಳಗಿನ ಮಹಿಳೆ ಮತ್ತು ಮಕ್ಕಳಿಗೆ ಸರ್ಕಾರದ ರಾಯಭಾರಿಗಳಂತಿದ್ದು, ಮಾಹಿತಿ ಒದಗಿಸಿ, ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಂತೆ ಮನವಿ ಮಾಡಿದ ಅವರು, ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಆಸರೆಯಾಗಬೇಕು. ಮಾತ್ರವಲ್ಲ ಸರ್ಕಾರದ ಜನಮುಖಿ ಕಾರ್ಯಕ್ರಮಗಳ ಯಶಸ್ಸಿನ ರೂವಾರಿಗಳು ತಾವಾಗಬೇಕು ಎಂದವರು ನುಡಿದರು.
ವಿಶೇಷವಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾತೃಸ್ವರೂಪರು. ನಾಗರಿಕ ಸಮಾಜದ ಜನರ ಸ್ವಾಸ್ಥ್ಯ ಕಾಪಾಡುವ, ಆರೋಗ್ಯವಂತ ಸಮಾಜ ನಿರ್ಮಿಸುವ ಸೈನಿಕರು ತಾವಾಗಬೇಕು ಎಂದ ಅವರು, ಮಹಿಳೆ ಮತ್ತು ಮಕ್ಕಳು ಬಹುಸುಲಭವಾಗಿ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಹೆಣ್ಣು ಎಂದರೆ ಭೋಗದ ವಸ್ತು ಎಂದುಕೊಂಡವರು ಅನೇಕ ಮಂದಿ ಇದೇ ಸಮಾಜದಲ್ಲಿದ್ದಾರೆ ಎಂಬುದು ನೋವಿನ ಸಂಗತಿಯಾದರೂ ಸತ್ಯ. ಬಾಲ್ಯವಿವಾಹ ಮತ್ತಿತರ ಕಾರಣಗಳಿಗಾಗಿ ಮಹಿಳೆಯರ ಜೀವನ ನಿರೀಕ್ಷೆಯಂತಿರದೇ ಅಸಹನೀಯವಾಗಿದೆ. ಸತಿಸಹಗಮನದಂತಹ ಅನಿಷ್ಟಗಳು ಇದೇ ಸಮಾಜದಲ್ಲಿ ಇದ್ದವು. ವಿಧವಾ ವಿವಾಹ, ಮಾನವ ಕಳ್ಳಸಾಗಾಣೆ ಇಂತಹ ಹಲವು ಕಳಂಕಗಳನ್ನು ನಿರ್ಮೂಲನೆಗೊಳಿಸಲು, ಹೆಣ್ಣು ಭ್ರೂಣ ಹತ್ಯೆಯಂತಹ ಅನೇಕ ಕಠಿಣ ಕಾರ್ಯಕ್ರಮಗಳು ಅನುಷ್ಟಾನಕ್ಕೆ ಬಂದಿವೆ ಎಂದರು.
ಪಿ.ಸಿ.ಪಿ.ಎನ್.ಡಿ.ಟಿ., ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಫೋಕ್ಸೊ ಮತ್ತಿತರ ಕಾನೂನುಗಳು ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿಯೇ ಜಾರಿಗೊಳಿಸಲಾಗಿದೆ. ಇವುಗಳ ಅನುಷ್ಟಾನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಈ ಕಾನೂನುಗಳು ಸಧ್ಬಳಕೆಗಿಂತ ದುರ್ಬಳಕೆಯೇ ಹೆಚ್ಚು ಎಂದರು.
ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಭಾರತಿ ಆರ್.ಬಣಕಾರ್, ರಾಜಯೋಗಿನಿ ಸ್ನೇಹಕ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಶಿರೇಖಾ ಅವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ|| ರಷ್ಮಿ ಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್‌ಖಾನ್‌ಅವರು ಆಗಮಿಸಿದ್ದರು.