ಮಂಜುನಾಥ್ ಶೆಟ್ಟಿ…
ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಕಾನೂನು ಎಲ್ಲ ರೀತಿಯ ರಕ್ಷಣೆ ನೀಡುತ್ತಿದ್ದು ಕಾನೂನುಗಳನ್ನು ಅರಿತು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತು ಅಮ್ಮನ ದಿನ. ಹೆಣ್ಣು ಗಂಡು ಎಂಬ ತಾರತಮ್ಯ ಇಲ್ಲ. ಹೆಣ್ಣುಮಕ್ಕಳಿಗೆ ದೇವರು ಎಲ್ಲ ಗುಣಗಳನ್ನು ನೀಡಿದ್ದು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಎಲ್ಲ ರೀತಿಯ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಳೆ. ಹೆಣ್ಣುಮಕ್ಕಳು ಈ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ನಂಬಿಕೆಯನ್ನು ಹೊಂದಿರಬೇಕು. ಹೆಣ್ಣುಮಕ್ಕಳ ಶಿಕ್ಷಣ, ಕ್ರೀಡೆಗೆ ಪ್ರೋತ್ಸಾಹ ಮಾಡುವುದು ತುಂಬಾ ಮುಖ್ಯವಾಗಿದೆ. ವಿವಿಧ ಸಂಘ ಸಂಸ್ಥೆಗಳು ಇಂತಹ ಕಾರ್ಯಗಳಲ್ಲಿ ಭಾಗವಹಿಸುವುದರ ಮೂಲಕ ಉತ್ತಮವಾಗಿ ಈ ದಿನವನ್ನು ಆಚರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ ಎಂ. ಎಸ್ ಮಾತನಾಡಿ, ತಾಯಿ ಜೀವನದಲ್ಲಿ ಕೊನೆಯವರೆಗೂ ಪ್ರೀತಿ, ವಾತ್ಸಲ್ಯ ನೀಡಿ ಮಾರ್ಗದರ್ಶನ ನೀಡುತ್ತಾಳೆ. ಯಾವುದೇ ಒಂದು ಕುಟುಂಬ ಹಾಗೂ ದೇಶದ ಏಳಿಗೆಗೆ ಮಹಿಳೆಯರ ಪಾತ್ರ ತುಂಬಾ ಮುಖ್ಯ. ಪ್ರೀತಿ, ಅಕ್ಕರೆ, ಜೀವನದ ಮುಖ್ಯ ಅಂಶಗಳನ್ನು ನೀಡುವವರೇ ತಾಯಿ, ಅಕ್ಕ, ತಂಗಿಯರಾಗಿದ್ದಾರೆ. ಕುಟುಂಬದ ಸೇತುವೆಯಾಗಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಾರೆ.
ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆಗಳು ಇದ್ದಲ್ಲಿ ಅಥವಾ ಸಲಹೆಗಳು ಬೇಕಾದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಡಿಯಲ್ಲಿ ಉಚಿತ ಕಾನೂನು ಅರಿವು, ನೆರವು, ಸಲಹೆಗಳನ್ನು ನೀಡಲಾಗುತ್ತದೆ. ಹಾಗೂ ಸಹಾಯವಾಣಿ 15100 ಸಂಖ್ಯೆಗೆ ಕರೆ ಮಾಡಿ ಸಲಹೆ ಮತ್ತು ನೆರವನ್ನು ಪಡೆಯಬಹುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಡಾ. ಹಸೀನಾ ಮಾತನಾಡಿ ಹೆಣ್ಣು ಒಂದು ದೊಡ್ಡ ಶಕ್ತಿ. ತಾಯಿಯಾಗಿ, ಮಡದಿಯಾಗಿ, ಗೃಹಿಣಿಯಾಗಿ, ಗೆಳತಿಯಾಗಿ, ಸಹೋದರಿಯಾಗಿ ತಮ್ಮ ಬದುಕನ್ನೇ ಕುಟುಂಬಕ್ಕಾಗಿ ಮೀಸಲಿಟ್ಟು ಕಾಪಾಡುತ್ತಾಳೆ. ಮಹಿಳೆ ಧಾರ್ಮಿಕವಾಗಿ,ರಾಜಿಕೀಯವಾಗಿ, ಸಾಮಾಜಿಕವಾಗಿ ಪ್ರತಿಯೊಂದರಲ್ಲೂ ಸಬಲೀಕರಣಗೊಂಡಿದ್ದಾಳೆ. ಭಾರತದ ಮೊದಲ ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಹಲವಾರು ಧೀಮಂತ ಮಹಿಳೆಯರು ಸ್ವಾತಂತ್ರ್ಯಹೋರಾಟಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದು ಅವರ ಚರಿತ್ರೆಯನ್ನು ಇಂದಿನ ಹೆಣ್ಣುಮಕ್ಕಳು ಮನದಲ್ಲಿ ಇಟ್ಟುಕೊಂಡು ಮುಂದಕ್ಕೆ ಸಾಗಬೇಕು ಎಂದು ಹೇಳಿದರು. ಪ್ರಾಚೀನ ಕಾಲದಿಂದ ಇಂದಿನ ಕಾಲದವರೆಗೂ ನಾರಿಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯು ಇಲ್ಲ, ನಾಡಿನ ಸಂಸ್ಕೃತಿಯನ್ನು, ಪರಂಪರೆಯನ್ನು ಉಳಿಸಿಕೊಂಡು ಹೋಗುವುದರಲ್ಲಿ ಮಹಿಳೆಯರು ತುಂಬಾ ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್, ಸ್ನೇಹಲತಾ, ಅರವಿಂದ್, ವಿದ್ಯಾರ್ಥಿಗಳು ಹಾಜರಿದ್ದರು.
ಮಹಿಳೆಯರು ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅತಿ ಉತ್ಸಾಹದಿಂದ ಪಾಲ್ಗೊಂಡರು.