ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯವು ‘ಸರ್ವರ ಸಬಲೀಕರಣ’ ಮತ್ತು ‘ನವ ಕರ್ನಾಟಕದ ನಿರ್ಮಾಣ’ಕ್ಕೆ ಹೊಸ ಶಕ್ತಿ ತುಂಬಿದೆ. ದಾಖಲೆಯ 17ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ತಮ್ಮಲ್ಲಿರುವ ಬದ್ಧತೆಯನ್ನು ಮುಖ್ಯಮಂತ್ರಿಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದೊಂದು ಕೇವಲ ಆರ್ಥಿಕ ಪಟ್ಟಿಯಲ್ಲ, ಬದಲಿಗೆ ರಾಜ್ಯದ ಶೈಕ್ಷಣಿಕ ಮತ್ತು ಸಾಮಾಜಿಕ ಸಬಲೀಕರಣದ ದಿಕ್ಸೂಚಿಯಾಗಿದೆ.

ವಿಶೇಷವಾಗಿ, ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನೀಡಿರುವ ಅಗ್ರಗಣ್ಯ ಆದ್ಯತೆಯು ನಮ್ಮ ಇಲಾಖೆಗೆ ಹೊಸ ಚೈತನ್ಯ ನೀಡಿದೆ. ಶೈಕ್ಷಣಿಕ ಮೂಲಸೌಕರ್ಯ, ಬೋಧಕ ಸಿಬ್ಬಂದಿಯ ಬಲವರ್ಧನೆ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಯೋಜನೆಗಳನ್ನು ಘೋಷಿಸುವ ಮೂಲಕ ಸರ್ಕಾರವು ಜ್ಞಾನಾಧಾರಿತ ಸಮಾಜ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ.

ಅದೇ ರೀತಿ, ನನ್ನ ತವರು ಜಿಲ್ಲೆಯಾದ ಶಿವಮೊಗ್ಗದ ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಗತಿಗೆ ನೀಡಿರುವ ವಿಶೇಷ ಕೊಡುಗೆಗಳು ಹಾಗೂ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಗಾಗಿ ಘೋಷಿಸಲಾಗಿರುವ ಕ್ರಾಂತಿಕಾರಿ ಯೋಜನೆಗಳಿಗಾಗಿ ನಾನು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನರ ಹಾಗೂ ಸಮುದಾಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯದೊಂದಿಗೆ ಮಂಡಿಸಲಾಗಿರುವ ಈ ಬಜೆಟ್, ಕರ್ನಾಟಕದ ಪ್ರಗತಿಯ ಹಾದಿಯಲ್ಲಿ ಮೈಲಿಗಲ್ಲಾಗಲಿದೆ. ಮುಖ್ಯಮಂತ್ರಿಗಳ ಈ ದೂರದೃಷ್ಟಿಯ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರಲು ನಮ್ಮ ಇಲಾಖೆ ಸಂಪೂರ್ಣವಾಗಿ ಶ್ರಮಿಸಲಿದೆ.”

  • ಶ್ರೀ ಎಸ್. ಮಧು ಬಂಗಾರಪ್ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ಕರ್ನಾಟಕ ಸರ್ಕಾರ.

Leave a Reply

Your email address will not be published. Required fields are marked *