ಮಂಜುನಾಥ್ ಶೆಟ್ಟಿ…
ಬಡವರಿಗೆ ಸೂರು ಒದಗಿಸುವ ಆಶ್ರಯ, ಆರಾಧನಾ, ಅಕ್ಷಯ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಹೀಗೆ ಬಡವರ ಏಳ್ಗೆಗಾಗಿ ಹಲವಾರು ಯೋಜನೆಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ಹೆಸರನ್ನು ಗೋಪಾಲಗೌಡ ಬಡಾವಣೆಯ ರಸ್ತೆಗೆ ನಾಮಕರಣ ಮಾಡುವ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.
ಗೋಪಾಲಗೌಡ ಬಡಾವಣೆಯಲ್ಲಿ ಏರ್ಪಡಿಸಲಾಗಿದ್ದ ಮಹಾನಗರ ಪಾಲಿಕೆ ವ್ಯಾಪ್ತಿಯ ಆಲ್ಕೊಳ ವೃತ್ತದಿಂದ ಬಂಟರ ಭವನ ಹಾದಿಯಾಗಿ ಡಿ.ವಿ.ಜಿ. ವೃತ್ತದವರೆಗೆ 100ಅಡಿ ದ್ವಿಪಥ ರಸ್ತೆಗೆ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಬಂಗಾರಪ್ಪ ರಸ್ತೆ ಎಂದು ನಾಮ ಫಲಕ ಉದ್ಘಾಟನೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿAದ 290 ಮನೆಗಳಿಗೆ ಹಕ್ಕುಪತ್ರಗಳ ವಿತರಣೆ ಹಾಗೂ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ಯೋಜನೆಗಳು, ಕಾರ್ಯಕ್ರಮಗಳು ಸದಾ ಹಸಿರಾಗಿವೆ. ಹಕ್ಕುಪತ್ರಗಳನ್ನು ವಿತರಣೆ ಮಾಡುವುದರಲ್ಲಿ ಕೂಡ ಅವರ ಚಿಂತನೆ ಇದೆ. ಗೋಪಾಲಗೌಡರ ಜಯಂತಿಯAದು ಬಂಗಾರಪ್ಪ ರಸ್ತೆ ನಾಮಕರಣವಾಗುತ್ತಿರುವುದು ಹಿರಿಯ ಚೇತನಗಳ ಆಶೀರ್ವಾದವಾಗಿದೆ ಹಾಗೂ ಉಸ್ತುವಾರಿ ಸಚಿವನಾಗಿ ಈ ಕಾರ್ಯಕ್ರಮ ಉದ್ಘಾಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಮತ್ತು ನನ್ನ ಪುಣ್ಯ ಎಂದ ಅವರು ಬಂಗಾರಪ್ಪನವರ ತತ್ವ, ಸಿದ್ದಾಂತಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ ಯೋಜನೆಗಳು ರೈತರ 20 ಹೆಚ್‌ಪಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿ ರೈತರ ನೆರವಿಗೆ ಬಂದಿರುವುದನ್ನು ನಾವು ಸದಾ ಸ್ಮರಿಸಬೇಕು. ಈ ಯೋಜನೆಗಳಿಂದ ರೈತರು ಆರ್ಥಿಕವಾಗಿ ಸುಧಾರಣೆಯಾಗುತ್ತಿರುವುದನ್ನು ನೋಡಿ ಸಂತೋಷವಾಗುತ್ತದೆ.
ಮಾನವೀಯತೆ ಸೇರಿದಂತೆ ಜೀವನಕ್ಕೆ ಅಗತ್ಯವಾದ ಎಲ್ಲವನ್ನು ನೀಡುವ ಶಿಕ್ಷಣ ಬಹಳ ಮುಖ್ಯವೆಂದು ಹೇಳುತ್ತಿದ್ದ ಬಂಗಾರಪ್ಪನವರು ಅಂದು ಒಂದು ಅದ್ಭುತ ಕಾರ್ಯಕ್ರಮ ತಂದರು. 90 ರ ದಶಕದಲ್ಲಿ ಬಡ ವರ್ಗಕ್ಕೆ ಶಿಕ್ಷಣ ಬಹಳ ಕಷ್ಟವಾಗಿತ್ತು. ಅಂತಹ ಸಂದರ್ಭದಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಪ್ರತಿ ದಿನ ರೂ. 1 ನ್ನು ಅವರ ತಾಯಿಯ ಕೈಯಲ್ಲಿ ನೀಡುವ ಯೋಜನೆ ಜಾರಿಗೆ ತಂದು, ಬಡವರ ಮಕ್ಕಳು ಶಾಲೆಗೆ ಬರುವಂತೆ ಮಾಡಿದರು ಎಂದ ಅವರು ಲೋಹಿಯಾ, ಗೋಪಾಲಗೌಡರು, ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಇವರನ್ನೆಲ್ಲ ನಾವು ಸ್ಮರಿಸಲೇಬೇಕು. ಇವರ ಚಿಂತನೆಗಳು, ಅವರು ಮಾಡಿದ ಕೆಲಸಗಳು ಜೀವಂತವಾಗಿವೆ.
1000 ಕೆಪಿಎಸ್ ಶಾಲೆ…
ಎಲ್ ಕೆಜಿಯಿಂದ 12 ನೇ ತರಗತಿವರೆಗೆವರೆಗೆ ಉಚಿತವಾಗಿ ಒಂದೇ ಸೂರಿನಡಿ ಶಿಕ್ಷಣ ಮತ್ತು ಉಚಿತ ಸಾರಿಗೆ ವ್ಯವಸ್ಥೆ, ಕಂಪ್ಯೂಟರ್, ಕೌಶಲ್ಯಾಭಿವೃದ್ದಿ, ಕಲೆ ಇತರೆ ಪೂರಕ ಶಿಕ್ಷಣವನ್ನು ನೀಡುವ 1000 ಕೆಪಿಎಸ್ ಶಾಲೆಗಳಿಗೆ ಗುದ್ದಲಿಪೂಜೆಯನ್ನು ಏಪ್ರಿಲ್ ಅಂತ್ಯದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಶಿವಮೊಗ್ಗದಲ್ಲಿಯೇ ನೆರವೇರಿಸುವರು ಎಂದ ಅವರು ಜಿಲ್ಲಾ ಆಸ್ಪತ್ರೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ತರುವ ಹಾಗೂ ಉಳಿದವರಿಗೆ ಹಕ್ಕುಪತ್ರಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಪಾಲಗೌಡ ಬಡಾವಣೆಯ 100ಅಡಿ ರಸ್ತೆಗೆ ಬಂಗಾರಪ್ಪನವರ ಹೆಸರನ್ನು ನಾಮಕರಣ ಮಾಡಿರುವುದು ಸಂತಸದ ವಿಷಯ. ಅಂದುಕೊAಡAತೆ ಕಾರ್ಯ ನಿರ್ವಹಣೆ ಮಾಡಿತ್ತಿದ್ದ ಧೀಮಂತ ವ್ಯಕ್ತಿ ಅವರು. ಎಂದಿಗೂ ಜಾತಿಗೆ ಅವರು ಅಂಟಿಕೊAಡಿರಲಿಲ್ಲ. ರಾಜ್ಯದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಸದಾ ಚಿಂತಿಸುತ್ತಿದ್ದ ಅವರು ಅಕ್ಷಯ, ಆರಾಧನಾ, ಆಶ್ರಯದಂತಹ ಉತ್ತಮ ಯೋಜನೆಗಳನ್ನು ನೀಡಿದ ಶ್ರೇಷ್ಟ ನಾಯಕ. ಬಂಗಾರಪ್ಪನವರು ಬಡವರಿಗೆ ಸೂರು ಒದಗಿಸಲು ತಂದ ಆಶ್ರಯ ಯೋಜನೆಯಡಿ ಬಡವರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಇನ್ನೂ ಹಲವರಿಗೆ ನೀಡಬೇಕಿದೆ.
ಕೆರೆ ಕಟ್ಟೆಗಳ ಜಾಗವನ್ನು ರಕ್ಷಿಸುವ ಅಗತ್ಯವಿದೆ. ದೊಡ್ಡ ದೊಡ್ಡ ಕಟ್ಟಡಗಳು ಕೆರೆಗಳ ಜಾಗದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ ಪರಿಹಾರ ಹುಡುಕಬೇಕಿದೆ ಎಂದ ಅವರು ಬಡವರ ಪರವಾಗಿ ನಾವೆಲ್ಲಾ ಒಟ್ಟಾಗಿ ಹೋಗೋಣ ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಹಕ್ಕುಪತ್ರ ಇಲ್ಲದೆ ಭಯದಲ್ಲಿ ಜೀವನ ನಡೆಸುತ್ತಿದ್ದ ಜನರಿಗೆ ಹಕ್ಕುಪತ್ರ ನೀಡುವ ಮೂಲಕ ಧೈರ್ಯ ತುಂಬಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಶ್ರಮಿಸುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಎಸಿ/ಎಸ್‌ಟಿ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ಮಾತನಾಡಿ, ರೂ.100 ಕೋಟಿ ಅನುದಾನವನ್ನು ಅಲೆಮಾರಿಗಳ ಅಭಿವೃದ್ದಿಗೆ ಮೀಸಲಿಡಲಾಗಿದೆ. ಅಲೆಮಾರಿಗಳ ಮಕ್ಕಳಿಗೆ ನಾಲ್ಕು ಶಾಲೆಗಳನ್ನು ನಿರ್ಮಿಸಲು ಅವಕಾಶ ನೀಡಲಾಗಿದ್ದು, ಅದರಲ್ಲಿ ಒಂದು ಶಾಲೆಯನ್ನು ಜಿಲ್ಲೆಗೆ ತರಲು ಸಚಿವರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳ) ನಿಗಮದ ಅಧ್ಯಕ್ಷರಾದ ಚೇತನ್ ಕೆ ಮಾತನಾಡಿ, ಬಡವರಿಗೆ ಸೂರು ಒದಗಿಸಲು ಆಶ್ರಯ ಯೋಜನೆ ಜಾರಿಗೆ ತಂದ ಧೀಮಂತ ನಾಯಕರಾದ ಬಂಗಾರಪ್ಪನವರ ಹೆಸರನ್ನು ಅವರ ಗುರುಗಳಾದ ಸಮಾಜವಾದಿ ಹೋರಾಟಗಾರರಾದ ಗೋಪಾಲಗೌಡರ ಬಡಾವನೆಯಲ್ಲಿ ನಾಮಕರಣವಾಗುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಡಾ.ಜಿ.ಡಿ.ನಾರಾಯಣಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿAದ 290 ಮನೆಗಳಿಗೆ ಹಕ್ಕುಪತ್ರಗಳ ವಿತರಣೆ ಹಾಗೂ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಇತರೆ ಮುಖಂಡರು ಪಾಲ್ಗೊಂಡಿದ್ದರು.