ಮಂಜುನಾಥ್ ಶೆಟ್ಟಿ…
ಗೋಷ್ಟಿ: ಕನ್ನಡ ಶಾಲೆಗಳು – ಈ ಹೊತ್ತಿನ ಸವಾಲುಗಳು
ಹಂದಿ, ಇಲಿಗಳ ಮೇಲೆ ಮಾಡುವ ಪ್ರಯೋಗ ಕನ್ನಡ ಶಾಲೆಗಳ ಮೇಲೆ ನಡೆಯುತ್ತಿದೆ
ಶಿವಮೊಗ್ಗ: ಹಂದಿ, ಇಲಿ, ನಾಯಿಗಳ ಮೇಲೆ ಮಾಡುವ ಪ್ರಯೋಗವನ್ನು ಸರ್ಕಾರ ಕನ್ನಡ ಶಾಲೆಗಳ ಮೇಲೆ ಮಾಡುತ್ತಿದೆ ಎಂದು ಹೊಸನಗರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿನ್ ಕುಮಾರ್ ಅಭಿಪ್ರಾಯಪಟ್ಟರು.
ಕನ್ನಡ ಶಾಲೆಗಳು – ಈ ಹೊತ್ತಿನ ಸವಾಲುಗಳು ಗೋಷ್ಟಿಯಲ್ಲಿ ಪೋಷಕರ ಪರವಾಗಿ ಪ್ರತಿನಿಧಿಸಿ ಮಾತನಾಡಿದರು.
ನಲಿ ಕಲಿ ಎಂಬ ಯೋಜನೆಯು ಬೇಡವೆಂದು ಪೋಷಕರು ಅಂದೇ ವಿರೋಧಿಸಿದ್ದರು. ಶಿಕ್ಷಕರಿಗೆ ಅರಿವಿದ್ದರು, ವಿರೋಧಿಸುವ ಧೈರ್ಯ ಮಾಡಲಿಲ್ಲ. ಇದರಿಂದ ಶಾಲೆ ನಿಜವಾಗಿಯು ಬಲಿಯಾಯಿತು. ಸಿ.ಬಿ.ಎಸ್.ಇ, ಐ.ಸಿ.ಎಸ್.ಇ ಯಂತಹ ಸ್ಪರ್ಧಾತ್ಮಕ ಯುಗದಲ್ಲಿ, ಯಾವ ಪಠ್ಯ ಹೆಚ್ಚು ವೈಭವಿಜರಣಗೊಳ್ಳುತ್ತದೆ, ಅದರತ್ತ ಓಡುವ ಅಂಧತ್ವದ ಪರಿಸ್ಥಿತಿ ಪೋಷಕರದಾಗಿದೆ. ನಮ್ಮ ಹಳ್ಳಿಯ ಶಾಲೆಗಳಿಗೆ ಕಲಿ ನಲಿ ವ್ಯವಸ್ಥೆ ಬೇಕಿದೆ.
ದಿನ ಬೆಳಗಾದರೆ ಅಧಿಕಾರಿಗಳು ಶಾಲೆಯಲ್ಲಿ ನೀಡುವ ಹಾಲು, ಮೊಟ್ಟೆ, ಬಾಳೆಹಣ್ಣಿನ ಲೆಕ್ಕವನ್ನು ಪರಿಶೀಲಿಸಿ, ಶಿಕ್ಷಕರ ಮೇಲೆ ಒತ್ತಡ ತರುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಅದರೆ ರಾಜ್ಯ ಪಠ್ಯಕ್ರಮದ ಹೆಸರಿನಲ್ಲಿ ಮಾನ್ಯತೆ ಪಡೆದು, ರಾಜ್ಯ ಪಠ್ಯಕ್ರಮ ಬಿಟ್ಟು, ತಮ್ಮದೇ ರಂಗುರಂಗಿನ ಪುಸ್ತಕ ನೀಡಿ ಮಕ್ಕಳಿಂದ ಹೆಚ್ಚು ಹಣ ಮಾಡುವ ವಿದ್ಯಾಸಂಸ್ಥೆಗಳ ಬಗ್ಗೆ ಯಾವ ಅಧಿಕಾರಿಯು ತನಿಖೆ ಮಾಡಿ ಶಿಕ್ಷಿಸುವುದಿಲ್ಲ. ಒಂದು ಬಗೆಯ ತುಘಲಕ್ ದರ್ಬಾರ್ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಹೇಳಿದರು.
ಶಿಕ್ಷಕರು, ಪೋಷಕರು, ಸ್ಥಳೀಯ ರಾಜಕಾರಣಿಗಳು ಒಟ್ಟಾಗಿ ಸೇರಿ ಸಂಘಟಿತರಾದಾಗ ಮಾತ್ರ ಕನ್ನಡದ ಶಾಲೆ ಉಳಿಯಲು ಸಾಧ್ಯ. ಹೊಸತನದ ಅವಕಾಶಗಳು ನೀಡುವಂತಹ ಯೋಜನೆಗಳನ್ನು ಸರ್ಕಾರ ರೂಪಿಸಲಿ ಎಂದು ಹೇಳಿದರು.
ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಚಿತ್ರಕಲಾವಿದ ಎಂ.ಎಸ್.ಮೂರ್ತಿ ಮಾತನಾಡಿ, ಪ್ರತಿಷ್ಟೆಯ ಭಯ ಮತ್ತು ಆತಂಕದಲ್ಲಿ ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಅದರೆ ಈ ನೆಲವನ್ನು ಬೆಳೆಸುವವರು ಸಮಚಿತ್ತದ ಸಾಮಾನ್ಯ ವಿದ್ಯಾರ್ಥಿಗಳು. ಅಂತಹ ಸಮಚಿತ್ತದ ಮಕ್ಕಳಲ್ಲಿ ಇರುವ ಆತ್ಮವಿಶ್ವಾಸ, ಸವಾಲುಗಳ ಎದುರಿಸುವ ಕೌಶಲ್ಯತೆಗಳನ್ನು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಕಾಣುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ಸಾಂಸ್ಕೃತಿಕವಾಗಿ ಚುಚ್ಚು ಮಾತುಗಳನ್ನಾಡುವ ಹಿಂದೆ ಬಿದ್ದಿದ್ದೇವೆ. ಎರಡು ಲಕ್ಷ ರೂಪಾಯಿ ಸಂಬಳ ತೆಗೆದುಕೊಳ್ಳುವ ಮೇಷ್ಟ್ರುಗಳಿಂದ ಯಾವುದೇ ಸಮಾಜಮುಖಿ ಸಂದೇಶ ಸಿಗುವುದಿಲ್ಲ. ನಮ್ಮ ಸಾಂಸ್ಕೃತಿಕ ಸಮಾಜ ನಡೆಸುತ್ತಿರುವುದು ಸಾಮಾನ್ಯ ಜ್ಞಾನ ಮಾತ್ರ. ದೊಡ್ಡ ವಿದ್ಯಾಸಂಸ್ಥೆಗೆ ಅಲೆಯುವ ಸಾಹಸದ ಬದಲು, ಪೋಷಕರು ತಮ್ಮ ಮಕ್ಕಳ ಎದುರು ಜ್ಞಾನ, ಆತ್ಮವಿಶ್ವಾಸ ತುಂಬುವ ಸಂಸ್ಥೆಯಾಗಿ ರೂಪಗೊಳ್ಳಿ ಎಂದು ಹೇಳಿದರು.
ಶಿಕ್ಷಕರ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಮಾತನಾಡಿ, ಕೆಪಿಎಸ್ ಶಾಲೆಗಳನ್ನು ತೆರೆಯುವ ಮೂಲಕ ಹಳ್ಳಿಯಲ್ಲಿರುವ ಕನ್ನಡದ ಶಾಲೆಗಳನ್ನು ಮುಚ್ಚುವಂತಹ ಹುನ್ನಾರ ನಡೆಯುತ್ತಿದೆ. ಅನೇಕ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಇರುವವರಿಗೆ ಬಿಸಿಯೂಟ, ಮೊಟ್ಟೆ ಲೆಕ್ಕಾಚಾರ, ಪೋಷಕರೊಂದಿಗೆ ಚರ್ಚೆ ಮಾಡುವ ಹೊರೆಯಿದೆ. ಇಂತಹ ಹೊರೆಯ ನಡುವೆ ಗುಣಾತ್ಮಕ ಶಿಕ್ಷಣದ ನೀಡುವುದಾದರು ಹೇಗೆ. ದಯಮಾಡಿ ಸರ್ಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಿ, ಕನಿಷ್ಟ ಮೂರು ಮೇಷ್ಟ್ರುಗಳನ್ನಾದರು ಪ್ರತಿ ಶಾಲೆಗಳಿಗೆ ನೇಮಕ ಮಾಡಿ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ರಾಮಾಚಾರ್, ಕರ್ನಾಟಕ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಶಿವರಾಂ.ಎನ್ ಮಾತನಾಡಿದರು.