ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಕಳೆದ 5 ದಿನಗಳಿಂದ ಬೂಟ್‌ಕ್ಯಾಂಪ್‌ನ ವಿವಿಧ ಕ್ರಿಯಾಶೀಲ ಚಟುವಟಿಕೆಗಳು ಮತ್ತು ಉಪನ್ಯಾಸಗಳಿಂದ ಪ್ರೇರಣೆ ಪಡೆದ ವಿದ್ಯಾರ್ಥಿಗಳು, ತಮ್ಮದೇ ಸೃಜನಶೀಲ ಯೋಜನೆಗಳನ್ನು ರೂಪಿಸಿ, ಅವುಗಳಿಗೆ ನಾವೀನ್ಯತೆ ಹಾಗೂ ಉದ್ಯಮಶೀಲತೆಯ ಸ್ಪರ್ಶ ನೀಡುವಲ್ಲಿ ಸಫಲರಾಗಿದ್ದರು.

ಒಂದು ನಾವೀನ್ಯ ಆಲೋಚನೆಯಿಂದ ಹೊಸ ಉದ್ಯಮ ಸ್ಥಾಪನೆಯವರೆಗೆ ಇರುವ ಪ್ರತಿಯೊಂದು ಹೆಜ್ಜೆಗಳನ್ನು ವಿಮರ್ಶಿಸಿ, ವಾಸ್ತವತೆಗೆ ತಕ್ಕಂತೆ ನೆರೆದ್ದಿದ್ದವರ ಎದುರು ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿದ್ದರು.

ನಗರದ ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಐಸಿಟಿಇ ನೇತೃತ್ವದಲ್ಲಿ ಭಾರತ ಶಿಕ್ಷಣ ಸಚಿವಾಲಯ, ವಾದ್ವಾನಿ ಫೌಂಡೇಷನ್‌ ಹಾಗೂ ಎಸ್‌ಬಿಐ ಫೌಂಡೇಷನ್‌ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಐದು ದಿನಗಳ ನಾವೀನ್ಯತೆ ಮತ್ತು ಉದ್ಯಮಶೀಲತೆ ಬೂಟ್‌ ಕ್ಯಾಂಪ್‌ ಕಾರ್ಯಕ್ರಮದ ಸಮಾರೋಪದ ದಿನ, ವಿದ್ಯಾರ್ಥಿಗಳ ಆವಿಷ್ಕಾರಾತ್ಮಕ ಯೋಚನೆಗಳಿಗೆ ಪ್ರೇರಣಾದಾಯಕ ವೇದಿಕೆಯಾಗಿ ರೂಪಗೊಂಡಿತ್ತು.

ದೇಶದ ವಿವಿಧ ಕಾಲೇಜಿನ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಸುಮಾರು 50 ಕ್ಕೂ ಹೆಚ್ಚು ಯೋಜನೆಗಳು ಪ್ರಸ್ತುತಗೊಂಡವು. ಎಐ ಮತ್ತು ಐಓಟಿಯಂತಹ ಆಧುನಿಕ ತಂತ್ರಜ್ಞಾನಗಳ ತಳಹದಿಯಲ್ಲಿ, ತಮ್ಮ ಸುತ್ತಲಿನ ಸಮಸ್ಯೆಗಳಿಗೆ ನವೀನತೆಯ ಪರಿಹಾರ ನೀಡುವಲ್ಲಿ ಉತ್ಸುಕರಾಗಿದ್ದರು.

ವಿಶೇಷವಾಗಿ ಆಂಧ್ರಪ್ರದೇಶದ ನರಸರಾವಪೇಟ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಸ್ತುತ ಪಡಿಸಿದ, ಬೆರಳುಗಳನ್ನು ಕಳೆದುಕೊಂಡವರಿಗೆ ಸಹಾಯಕವಾಗುವ ‘ಪ್ರೋಸ್ಥೆಟಿಕ್ ಲಿಂಬ್’ ಹೆಸರಿನ ಕೃತಕ ಸಾಧನದ ಯೋಜನೆ, ಡೈ-ಕಟ್ ಮುದ್ರಣ ತಂತ್ರಜ್ಞಾನ ಬಳಸಿ ಮಕ್ಕಳಲ್ಲಿ ಡಿಜಿಟಲ್ ರಹಿತ ಶಿಕ್ಷಣಕ್ಕೆ ಉತ್ತೇಜಿಸುವ ‘ಎಜುಕೇಷನಲ್ ಹೆಕ್ಸಾ ಕ್ಯೂಬ್’, ಜೆ.ಎನ್‌.ಎನ್‌.ಸಿ ಕಾಲೇಜು ವಿದ್ಯಾರ್ಥಿಗಳ ತಂಡ ಪ್ರಸ್ತುತಪಡಿಸಿದ ಕೃತಕ ಬುದ್ದಿಮತ್ತೆ ಆಧಾರಿತ ಡಿಜಿಟಲ್ ವಂಚನೆಗಳನ್ನು ತಡೆಯುವ ಹಾಗೂ ಆನ್‌ಲೈನ್ ವ್ಯವಸ್ಥೆಗಳ ನಂಬಿಕೆಯನ್ನು ಹೆಚ್ಚಿಸುವಂತಹ ‘ಫ್ರಾಡ್‌ಲೆನ್ಸ್ ಟೆಕ್ನಾಲಜೀಸ್’ ಯೋಜನೆ, ಅದೇ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ, ತಮ್ಮದೆ ಪ್ರೊಪೈಲ್‌ ನಿರ್ಮಿಸಿ ಸೂಕ್ತವಾದ ವಿದ್ಯಾರ್ಥಿ ವೇತನವನ್ನು ಹುಡುಕಿ, ಅರ್ಜಿ ಸಲ್ಲಿಸುವಂತಹ ಕೇಂದ್ರಿಕೃತ ತಂತ್ರಜ್ಞಾನ ವೇದಿಕೆ, ತಮಿಳುನಾಡಿನ ಧೀರಜ್‌ಲಾಲ್ ಗಾಂಧಿ ಕಾಲೇಜ್ ಆಫ್ ಟೆಕ್ನಾಲಜಿ ತಂಡ ಪ್ರಸ್ತುತಪಡಿಸಿದ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಉಳಿಯುವ ಆಹಾರವನ್ನು ಹತ್ತಿರದ ಗ್ರಾಹಕರು ಹಾಗೂ ಎನ್‌ಜಿಒಗಳೊಂದಿಗೆ ಸಂಪರ್ಕಿಸುವಂತಹ ಸರ್‌ಪ್ಲಸ್‌ಸಿಂಕ್‌ ಯೋಚನೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು.

ಶುಕ್ರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ಅಭಿನಂದನಾ ಪತ್ರ ವಿತರಿಸಲಾಯಿತು. ಕಳೆದ 5 ದಿನಗಳಲ್ಲಿ ವಿದ್ಯಾರ್ಥಿಗಳು ಉದ್ಯಮಶೀಲ ವಿಷಯಗಳ ಕುರಿತ ಉಪನ್ಯಾಸದ ಜೊತೆಗೆ ಅಮೃತನೋನಿ ಸಂಸ್ಥೆ ಮತ್ತು ಎಐಸಿಟಿಇ ಐಡಿಯಾ ಲ್ಯಾಬ್‌ಗೆ ಭೇಟಿ ನೀಡಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಕುರಿತು ಮಾಹಿತಿ ಪಡೆದರು. ಎಐಸಿಟಿಇ ಇನೋವೇಶನ್‌ ಕೇಂದ್ರದ ಪ್ರಾದೇಶಿಕ ಸಂಯೋಜಕರಾದ ಅಶೀಷ್‌ ತ್ರಿಪಾಠಿ, ವಾದ್ವಾನಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಡಾ.ಸುಪ್ರಭ, ಕಾಲೇಜಿನ ಸಂಶೋಧನಾ ಡೀನ್‌ ಡಾ.ಎಸ್.ವಿ.ಸತ್ಯನಾರಾಯಣ, ಎಐಸಿಟಿಇ ಜೆಎನ್‌ಎನ್‌ಸಿಇ ಐಡಿಯಾ ಲ್ಯಾಬ್‌ ಸಂಯೋಜಕ ಡಾ.ಎಂ.ಎಚ್.ಮೋಯಿನುದ್ದಿನ್‌ ಖಾನ್‌, ಬೂಟ್‌ಕ್ಯಾಂಪ್‌ ಸಂಯೋಜಕ ಕೆ.ಎಲ್.ಅರುಣ್‌ ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ: ಐದು ದಿನಗಳ ಬೂಟ್‌ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಜೆ.ಎನ್‌.ಎನ್‌.ಸಿ ಕಾಲೇಜಿನಲ್ಲಿರುವ ಎಐಸಿಟಿಇ ಐಡಿಯಾ ಲ್ಯಾಬ್‌ಗೆ ಭೇಟಿ ನೀಡಿ ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆಗಳ ಮಾಹಿತಿ ಪಡೆದರು.

Leave a Reply

Your email address will not be published. Required fields are marked *