ಮಂಜುನಾಥ್ ಶೆಟ್ಟಿ…
ಶಿವಮೊಗ್ಗದ ನೀರು ಶುದ್ಧೀಕರಣ ಘಟಕ ಕೆ.ಆರ್. ವಾಟರ್ ವರ್ಕ್ಸ್ ಗೆ ಶಾಸಕರೊಂದಿಗೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ತಂಡ ಭೇಟಿ ನೀಡಿ ನೀರು ಶುದ್ದೀಕರಣ ಪ್ರಕ್ರಿಯೆಯ ವಿವಿಧ ಹಂತಗಳು ಮತ್ತು ಪ್ರಯೋಗಾಲಯವನ್ನು ಇಂದು ಖುದ್ದಾಗಿ ಭೇಟಿ ನೀಡಿ ವೀಕ್ಷಿಸಲಾಯಿತು.
ಇಲ್ಲಿ ಕಾರ್ಯಾಚರಣೆ ನಡೆಸದೆ ಸ್ಥಗಿತಗೊಂಡಿರುವ ಮೆಷೀನ್ ಗಳು, ದುರಸ್ತಿಯಾಗಬೇಕಾದ ಮೋಟಾರ್ ಉಪಕರಣಗಳು, ಹವಾ ನಿಯಂತ್ರಿತ ಪ್ರಯೋಗಾಲಯದ ಸ್ಥಾಪನೆ, ಫಿಲ್ಟರ್ ಬೆಡ್ ಗಳ ಶೀಘ್ರ ದುರಸ್ತಿ, ಆಲಂ ರಾಸಾಯನಿಕ ಸಂಗ್ರಹಣೆ ಮತ್ತು ಬಳಕೆಯ ಕೊರತೆ, ಡಿಜಿಟಲ್ ಕ್ಲೋರಿನ್ ಮಾಪನ ಯಂತ್ರಗಳ ಅಳವಡಿಕೆ ಹಾಗೂ ಕ್ಲಾರಿ ಫ್ಲಾಕ್ಯುಲೇಟರ್ ಘಟಕಗಳಲ್ಲಿ ಕಂಡುಬಂದ ಅನೇಕ ಲೋಪದೋಷಗಳ ಬಗ್ಗೆ ಅತ್ಯಂತ ಶೀಘ್ರವಾಗಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಮತ್ತು ಸ್ಥಗಿತಗೊಂಡಿರುವ ಪ್ರಮುಖ ಉಪಕರಣಗಳನ್ನು ಶೀಘ್ರವೇ ಬದಲಾಯಿಸುವಂತೆ ಒತ್ತಾಯಿಸಲಾಯಿತು.
ಶಾಸಕರು ಇದಕ್ಕೆ ಪೂರಕವಾಗಿ ಸ್ಪಂದಿಸಿ ಮುಂದಿನ ಮಳೆಗಾಲ ಆರಂಭವಾಗುವುದರ ಒಳಗೆ ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಲಾಗುವುದು ಹಾಗೂ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೆ ಏರಿಸಿ ಶುದ್ಧ ನೀರು ಸರಬರಾಜಿಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಲು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಕ್ಕೂಟದ ಪ್ರಮುಖರಾದ ಕೆವಿ ವಸಂತ್ ಕುಮಾರ್, ಡಾ. ಎ ಸತೀಶ್ ಕುಮಾರ್ ಶೆಟ್ಟಿ, ಎಸ್. ಆರ್. ಗೋಪಾಲ್, ಎಸ್ ಬಿ ಅಶೋಕ್ ಕುಮಾರ್, ಕೇಶವಮೂರ್ತಿ ಹೆದ್ದೂರ್, ನಗರ ನೀರು ಸೊರಬರಾಜು ಮಂಡಳಿಯ ಇಂಜಿನಿಯರ್ಗಳಾದ ರಾಘವೇಂದ್ರ ಜೀವನ್ ಹಾಗೂ ಇತರರು ಉಪಸ್ಥಿತರಿದ್ದರು.