ಮಂಜುನಾಥ್ ಶೆಟ್ಟಿ…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಹಾಗೂ ಜಿಲ್ಲಾ ಸೈನಿಕ ಬೋರ್ಡ್ ವತಿಯಿಂದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಯುತ ಸಂತೋಷ್ ಎಂ ಎಸ್ ರವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಾರಿಯಲ್ಲಿರುವ ವೀರ್ ಪರಿವಾರ ಸಹಾಯತಾ ಯೋಜನಾ ಕುರಿತು ವಿವರವನ್ನು ಮಾಜಿ ಸೈನಿಕರು ಮತ್ತು ಅವರ ಕುಟುಂಬ ವರ್ಗದವರಿಗೆ ನೀಡಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಅಧಿನಿಯಮ 1987ರ ಕಲಂ 12 ರಲ್ಲಿ ನಮೂದಿಸಲಾದ ಅರ್ಹ ವ್ಯಕ್ತಿಗಳಿಗೆ ಕಾನೂನು ಸೇವೆಗಳನ್ನು ನೀಡಲಾಗುತ್ತಿದ್ದು ಅಂತಹ ಸೌಲಭ್ಯಗಳನ್ನು ಸೈನಿಕರು, ಮಾಜಿ ಸೈನಿಕರು, ವೀರನಾರಿಯರು ಹಾಗೂ ಸೈನಿಕರ ಕುಟುಂಬ ವರ್ಗದವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕ ಕಾನೂನು ಸೇವಾ ಸಮಿತಿಗಳಿಂದ ಪಡೆದುಕೊಳ್ಳಬಹುದು ಎಂದು ತಿಳಿಸುತ್ತಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಮಿತಿಗಳು ಉಚಿತವಾಗಿ ಕಾನೂನು ಅರಿವನ್ನು ಹಾಗೂ ನೆರವನ್ನು ನೀಡುತ್ತಿವೆ.
ಅಲ್ಲದೆ ವಕೀಲರ ಸೇವೆಯನ್ನು ಉಚಿತವಾಗಿ ನೀಡಿ ಪ್ರಕರಣವನ್ನು ದಾಖಲಿಸುವುದು ಅಥವಾ ದಾಖಲಾದ ಪ್ರಕರಣದಲ್ಲಿ ಪಕ್ಷಗಾರರನ್ನು ಪ್ರತಿನಿಧಿಸುವುದು ಮತ್ತು ರಾಜಿ ಸಂಧಾನದ ಕುರಿತಾಗಿ ಮಧ್ಯಸ್ಥಿಕೆಯ ಮೂಲಕ ವ್ಯಾಜ್ಯದ ಇಬ್ಬರೂ ಪಕ್ಷಗಾರರನ್ನು ಮಾತನಾಡಿಸುವುದು ಹಾಗೂ ಲೋಕ ಅದಾಳತಗಳ ಸದ್ಬಳಕೆಯನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು. ಕೆಲವರಿಗೆ ನ್ಯಾಯಾಲಯದ ಆವರಣಕ್ಕೆ ಹೋಗಿ ಕಾನೂನು ಸಲಹೆಯನ್ನು ಪಡೆದುಕೊಳ್ಳುವುದು ಕಷ್ಟವಾದರೆ ಅವರು ತಮ್ಮ ಮನೆಯಿಂದಲೇ ಅಂತಹ ಸೌಲಭ್ಯವನ್ನು ದೂರವಾಣಿ ಮೂಲಕ ಕಾನೂನು ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಿ ಉಚಿತ ಕಾನೂನು ಸಲಹೆಯನ್ನು ಪಡೆದುಕೊಳ್ಳಬಹುದು ಎಂದು ಎಲ್ಲರಿಗೂ ಮಾಹಿತಿಯನ್ನು ನೀಡಿದರು. ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಮಿತಿಗಳು ನ್ಯಾಯಾಲಯದಲ್ಲಿನ ವ್ಯಾಜ್ಯಗಳಷ್ಟೇ ಅಲ್ಲದೆ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ದಾಖಲಿಸಿಕೊಂಡು ರಾಜಿ ಸಂಧಾನದ ಮೂಲಕ ಜನರಿಗೆ ಕಾನೂನಿಗೆ ಅನುಗುಣವಾಗಿ ನ್ಯಾಯ ಒದಗಿಸಲು ಕ್ರಮವನ್ನು ವಹಿಸುತ್ತಿವೆ ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸೈನಿಕರಿಗಾಗಿ ಉಚಿತ ಸಲಹೆಯನ್ನು ಮತ್ತು ನೆರವನ್ನು ನೀಡುವ ಉದ್ದೇಶದಿಂದ ಜಿಲ್ಲಾ ಸೈನಿಕ್ ಬೋರ್ಡ್ ನಲ್ಲಿ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಮಾಜಿ ಸೈನಿಕರ ಪೈಕಿ ಒಬ್ಬರಾದ ಡಾ. ನಟರಾಜ್ ರವರನ್ನು ವಕೀಲರನ್ನಾಗಿ ಅಲ್ಲಿ ನೇಮಿಸಲಾಗಿದೆ ಹಾಗಾಗಿ ಅವರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರು ಹಾಗೂ ಮಾಜಿ ಸೈನಿಕರಾದ ಡಾ. ನಟರಾಜ್, ರವರು ಮಾತನಾಡಿ ವೀರ ಪರಿವಾರ ಸಹಾಯತ ಯೋಜನ ಅನುಷ್ಠಾನದ ಕುರಿತಾಗಿ ಮತ್ತು ಇಲ್ಲಿಯವರೆಗೂ ಅವರಿಗೆ ಬಂದಂತಹ ಪ್ರಕರಣಗಳ ಕುರಿತು ಉದಾಹರಣೆ ನೀಡುತ್ತಾ ಕಾನೂನು ಸೇವೆಗಳನ್ನು ಸೈನಿಕರು ಮತ್ತು ಅವರ ಕುಟುಂಬ ವರ್ಗದವರು ಯಾವ ರೀತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಮುಖ್ಯವಾಗಿ ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬ ವರ್ಗದವರಿಗೆ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ ಅಂತಹ ವಿಚಾರಗಳಿಗೂ ಸಹ ಕಾನೂನು ಅಭಿಪ್ರಾಯವನ್ನು ಪಡೆದುಕೊಂಡು ಸೈನಿಕರು ಮತ್ತು ಅವರ ಕುಟುಂಬ ವರ್ಗದವರು ಸೂಕ್ತ ಕ್ರಮವನ್ನು ವಹಿಸಬಹುದು ಎಂದು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸೈನಿಕ್ ಬೋರ್ಡ್ ನ ಉಪನಿರ್ದೇಶಕರಾದ ಡಾ. ಸಿ. ಎ. ಹಿರೇಮಠ್ ರವರು ಸೈನಿಕರು ಅನೇಕ ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದು ಇದಕ್ಕಾಗಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಜಿಲ್ಲಾ ಸೈನಿಕ್ ಬೋರ್ಡ್ ನಲ್ಲಿ ಸ್ಥಾಪಿಸಲಾದ ಕಾನೂನು ಸಲಹ ಕೇಂದ್ರವು ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಲ್ಪಿಸಲಾದ ಅವಕಾಶವನ್ನು ಎಲ್ಲಾ ಮಾಜಿ ಸೈನಿಕರು ಮತ್ತು ಅವರ ಕುಟುಂಬ ವರ್ಗದವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸ್ವಾಗತಿಸಿದರು.