ಮಂಜುನಾಥ ಶೆಟ್ಟಿ…
ಶಿವಮೊಗ್ಗ: ನಗರದ ಬಸವನಗುಡಿ ಸಮೀಪ ಹಸುವೊಂದು ಕರುಗೆ ಜನ್ಮ ನೀಡಿರುವ ಮಾಹಿತಿ ತಿಳಿದ ತಕ್ಷಣ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕರಾದ ಹೆಚ್.ಸಿ. ಯೋಗೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಸು ಮತ್ತು ನವಜಾತ ಕರುವಿನ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಂಡರು.
ಹಸು ಹಾಗೂ ಕರುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಅವರು ತಕ್ಷಣ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸಿದರು. ಪಶುವೈದ್ಯರ ಪರಿಶೀಲನೆಯ ಬಳಿಕ ತಾಯಿ ಮತ್ತು ಕರು ಇಬ್ಬರೂ ಆರೋಗ್ಯವಾಗಿರುವುದು ದೃಢಪಟ್ಟಿತು.
ಬಳಿಕ ಹಸುವಿನ ಮಾಲೀಕರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಯಿತಾದರೂ ಯಾರೂ ಮುಂದೆ ಬಾರದ ಕಾರಣ, ಹಸು ಮತ್ತು ಕರುವಿನ ಮುಂದಿನ ಆರೈಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಗೋಶಾಲೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅವರ ಸಹಕಾರದೊಂದಿಗೆ ತಾಯಿ ಮತ್ತು ಕರುವನ್ನು ಗೋಶಾಲೆಗೆ ಸುರಕ್ಷಿತವಾಗಿ ಸ್ಥಳಾಂತರಿಸಿ ಸೂಕ್ತ ಆರೈಕೆಯ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಸಿ. ಯೋಗೇಶ್ ಅವರು, “ಮೂಕ ಪ್ರಾಣಿಗಳ ರಕ್ಷಣೆ ಮತ್ತು ಆರೈಕೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ಜೀವಿಗಳ ಮೇಲಿನ ಕರುಣೆ ಮತ್ತು ಸಹಾನುಭೂತಿ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಸ್ಪಂದಿಸಿ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು. ಗೋ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.
ಹಸು ಮತ್ತು ನವಜಾತ ಕರುವಿನ ಸುರಕ್ಷತೆಗಾಗಿ ತ್ವರಿತ ಕ್ರಮ ಕೈಗೊಂಡ ಹೆಚ್.ಸಿ. ಯೋಗೇಶ್ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.