ಮಂಜುನಾಥ ಶೆಟ್ಟಿ…
ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಸುಗಮ ಸಾರಿಗೆ ವ್ಯವಸ್ಥೆಯ ದೃಷ್ಟಿಯಿಂದ ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿಟ್ಟುಕೊಳ್ಳುವಂತೆ ಈ ಹಿಂದೆಯೇ ಸೂಚನೆ ನೀಡಿದ್ದರು.
ಇಂದು ಶಿವಮೊಗ್ಗ ನಗರದ ಅಶೋಕ ಸರ್ಕಲ್, ಶಿವಪ್ಪನಾಯಕನ ಸರ್ಕಲ್ ಹಾಗೂ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಂದ ಜಂಟಿಯಾಗಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರ ಆಟೋ ರಿಕ್ಷಾಗಳ ಚಾಲನಾ ಪರವಾನಗಿ (Driving Licence), ವಿಮೆ (Insurance), ಫಿಟ್‌ನೆಸ್ ಪ್ರಮಾಣಪತ್ರ (Fitness Certificate), ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (Pollution Certificate), ಡಿಸ್‌ಪ್ಲೇ ಕಾರ್ಡ್ (Display Card) ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಯಿತು. ದಾಖಲೆಗಳು ಚಾಲ್ತಿಯಲ್ಲಿಲ್ಲದ ಹಾಗೂ ನಿಯಮ ಉಲ್ಲಂಘಿಸಿರುವ ಒಟ್ಟು 70 ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆಯಲಾಯಿತು.
ಅದರಲ್ಲಿಯೂ ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮುಕ್ತಾಯಗೊಂಡಿರುವ ಆಟೋ ರಿಕ್ಷಾಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಮುಂದಿನ ದಿನಗಳಲ್ಲಿಯೂ ಇಂತಹ ತಪಾಸಣಾ ಹಾಗೂ ಕಾನೂನು ಜರುಗಿಸುವ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು. ಆದ್ದರಿಂದ ಎಲ್ಲಾ ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ಚಾಲನಾ ಪರವಾನಗಿ, ವಿಮೆ, ಫಿಟ್‌ನೆಸ್ ಪ್ರಮಾಣಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ, ಡಿಸ್‌ಪ್ಲೇ ಕಾರ್ಡ್ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿಟ್ಟುಕೊಂಡು ವಾಹನ ಚಲಾಯಿಸುವಂತೆ ಸೂಚಿಸಿದರು.
ಅದೇ ರೀತಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಟೋ ಮೀಟರ್ ಬಳಸಿ ಮೀಟರ್‌ನಲ್ಲಿ ನಮೂದಾಗುವ ನಿಗದಿತ ದರವನ್ನು ಮಾತ್ರ ಪ್ರಯಾಣಿಕರಿಂದ ಪಡೆಯಬೇಕು. ನಿಗದಿತ ಮೀಟರ್ ದರಕ್ಕಿಂತ ಹೆಚ್ಚಿನ ಬಾಡಿಗೆ ಪಡೆಯದಂತೆ ಎಲ್ಲಾ ಆಟೋ ಚಾಲಕರಿಗೆ ಸೂಚಿಸಲಾಗಿದೆ ಎಂದರು.
ಪ್ರಯಾಣಿಕರ ಸುರಕ್ಷತೆ, ಪಾರದರ್ಶಕ ಬಾಡಿಗೆ ವ್ಯವಸ್ಥೆ ಹಾಗೂ ಸುಗಮ ಸಾರಿಗೆಗಾಗಿ ಸಾರ್ವಜನಿಕರು ಮತ್ತು ಆಟೋ ಚಾಲಕರು ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.