ಮಂಜುನಾಥ ಶೆಟ್ಟಿ…

ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿರಬೇಕು ಹಾಗೂ ಈ ಅವಧಿಯಲ್ಲಿ ಪಡಿತರ ವಿತರಣೆ ನಡೆಸಬೇಕು ಎಂದು ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಜುಲೈ-2026ರ ಅನ್ನಭಾಗ್ಯ ಅಕ್ಕಿ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿ ವಿತರಿಸಲಾಗುವ ಅಕ್ಕಿಯನ್ನು ಫಲಾನುಭವಿಗಳಿಗೆ ಯಾವುದೇ ವಿಳಂಬವಿಲ್ಲದೆ ತಲುಪಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.

ವಿಳಂಬಕ್ಕೆ ಬ್ರೇಕ್ ಹಾಕಿದ ಇಲಾಖೆ…

ಕೆಲವು ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸಗಟು ಮಳಿಗೆಗಳಿಂದ ಆಹಾರಧಾನ್ಯವನ್ನು ಸಂಪೂರ್ಣವಾಗಿ ಪಡೆದುಕೊಂಡಿದ್ದರೂ ಪಡಿತರ ವಿತರಣೆಯನ್ನು ತಕ್ಷಣ ಆರಂಭಿಸದೆ ವಿಳಂಬ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಕೆಲವು ಕಡೆ ಎಲ್ಲಾ ಆಹಾರಧಾನ್ಯ ಬಂದ ಬಳಿಕವೇ ವಿತರಣೆ ಆರಂಭಿಸುತ್ತಿರುವ ಪ್ರಕರಣಗಳೂ ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ, ಯಾವ ಪ್ರಮಾಣದ ಆಹಾರಧಾನ್ಯ ಲಭ್ಯವಾಗುತ್ತದೆಯೋ ಅದನ್ನು ಕೂಡಲೇ ಫಲಾನುಭವಿಗಳಿಗೆ ವಿತರಿಸಬೇಕು. ಎಲ್ಲಾ ದಾಸ್ತಾನು ಬರುವವರೆಗೆ ಕಾಯಬಾರದು ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜುಲೈ ತಿಂಗಳ NFSA ಆಹಾರಧಾನ್ಯ ಹಾಗೂ ಅನ್ನಭಾಗ್ಯ ಅಕ್ಕಿಯ ವಿತರಣೆಯನ್ನು ಜುಲೈ 31ರೊಳಗೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದಕ್ಕಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ…

ಜಿಲ್ಲೆಗಳ ಜಂಟಿ ಹಾಗೂ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ಆಹಾರ ನಿರೀಕ್ಷಕರು ನಿಯಮಿತವಾಗಿ ಮೇಲ್ವಿಚಾರಣೆ ನಡೆಸಿ, ಅರ್ಹ ಪಡಿತರ ಚೀಟಿದಾರರಿಗೆ ಸಂಪೂರ್ಣ ಆಹಾರಧಾನ್ಯ ವಿತರಣೆ ಆಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇಲಾಖೆ ಆದೇಶಿಸಿದೆ.

ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿಗದಿತ ಸಮಯದಲ್ಲಿ ಅಂಗಡಿ ತೆರೆಯದಿದ್ದರೆ ಅಥವಾ ಪಡಿತರ ವಿತರಣೆಯಲ್ಲಿ ಅನಗತ್ಯ ವಿಳಂಬ ಮಾಡಿದರೆ, ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ವಿತರಕರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಎಚ್ಚರಿಕೆ ನೀಡಿದೆ.