ಮಂಜುನಾಥ ಶೆಟ್ಟಿ…
ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ನಗರದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ನಿರುಪಯುಕ್ತವಾಗಿ ನಿಲ್ಲಿಸಲಾಗಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಇಂದು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಿದ್ದ ವಾಹನಗಳನ್ನು ಇದೀಗ ಪೊಲೀಸರು ವಶಕ್ಕೆ ಪಡೆದು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.
ನಗರದ ಅಶೋಕನಗರ 7ನೇ ರಸ್ತೆ, ಬೈಪಾಸ್ ರಸ್ತೆ, ಪ್ಯಾಷನ್ ಪಾರ್ಟ್ ಸಮೀಪ, ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾರಸುದಾರರಿಲ್ಲದೆ ಹಾಗೂ ಬಳಕೆಯಾಗದೆ ನಿಂತಿದ್ದ ಆಟೋ ರಿಕ್ಷಾಗಳು, ಮಾರುತಿ ಇಕೊ ಕಾರು ಸೇರಿದಂತೆ ಹಲವು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 82 ನಿರುಪಯುಕ್ತ ವಾಹನಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ 59 ವಾಹನಗಳಿಗೆ ನೋಟಿಸ್ ಅಂಟಿಸಲಾಗಿತ್ತು. ಬಳಿಕ ವಾಹನ ಮಾಲೀಕರಿಗೆ ಅವಕಾಶ ನೀಡಿದ ನಂತರವೂ ತೆರವುಗೊಳಿಸದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದುವರೆಗೆ 68 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳನ್ನು ರವೀಂದ್ರನಗರ, ಗುಂಡಪ್ಪಶೆಟ್ಟಿಹಳ್ಳಿ, ಲಕ್ಷ್ಮೀ ಚಿತ್ರಮಂದಿರ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಂದ ತೆರವುಗೊಳಿಸಲಾಗಿದೆ.ಇನ್ನೂ ಉಳಿದಿದ್ದ 14 ವಾಹನಗಳ ಪೈಕಿ 8 ವಾಹನಗಳನ್ನು ಮಾಲೀಕರೇ ತೆರವುಗೊಳಿಸಿದ್ದು, ಉಳಿದ ವಾಹನಗಳ ವಿರುದ್ಧವೂ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.