ಮಂಜುನಾಥ್ ಶೆಟ್ಟಿ…

ಆಗುಂಬೆಯಲ್ಲಿ ಶಾಲಾ ಮಕ್ಕಳೊಂದಿಗೆ ಖಾಕಿ ಸಮವಸ್ತ್ರ ತೊಟ್ಟ ಅಧಿಕಾರಿಯೊಬ್ಬರು ಗದ್ದೆಗೆ ಇಳಿದು ಭತ್ತದ ಸಸಿ ನೆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೊನ್ನೇತಾಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಕೃಷಿ ಅಧ್ಯಯನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಆಗುಂಬೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶಿವನಗೌಡ ಪಾಟೀಲ್ ಅವರು ಸ್ವತಃ ಕೆಸರು ಗದ್ದೆಗೆ ಇಳಿದು, ಮಕ್ಕಳಿಗೆ ಹೂಟಿ ಮತ್ತು ನಾಟಿ ಕೆಲಸಗಳನ್ನು ಮಾಡಿ ತೋರಿಸಿಕೊಟ್ಟರು.

ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕದ ಪಾಠದ ಜೊತೆಗೆ ಕೃಷಿ ಪಾಠವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಪ್ರತಿ ವರ್ಷವೂ ಗದ್ದೆ ನಾಟಿ ಕಾರ್ಯಕ್ರಮ ನಡೆಸಲಾಗುತ್ತದೆ. ಅದರಂತೆ ಈ ವರ್ಷವೂ ಶಾಲೆಯ ಸಮೀಪದ ಭತ್ತದ ಗದ್ದೆಯಲ್ಲಿ ಗ್ರಾಮೀಣ ಭಾಗದ ಮಕ್ಕಳು ಅತ್ಯಂತ ಸಂಭ್ರಮದಿಂದ ಸಸಿ ನೆಟ್ಟರು. ಅಧಿಕಾರಿ ಶಿವನಗೌಡ ಪಾಟೀಲ್ ಅವರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕೃಷಿಯ ಅರಿವು ಮೂಡಿಸಿದ ಶೈಲಿ ಮತ್ತು ಶಿಕ್ಷಕರ ಈ ಕೃಷಿ ಪ್ರೀತಿಯ ಪ್ರಯತ್ನಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *