ಮಂಜುನಾಥ್ ಶೆಟ್ಟಿ…

ಶಿವಮೊಗ್ಗದಲ್ಲಿ ನಡೆಯಲಿರುವ ದಸರಾ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ಮೆರವಣಿಗೆಯಲ್ಲಿ ಬಳಸಬಾರದು ಎಂದು ಆಗ್ರಹಿಸಿ ವನ್ಯಜೀವಿ ಮತ್ತು ಪರಿಸರ ಹೋರಾಟಗಾರರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ ದಿಲೀಪ್ ನಾಡಿಗ್ ಹಾಗೂ ಪರಿಸರ ಹೋರಾಟಗಾರ ಶ್ರೀರಮೇಶ್, ಕರ್ನಾಟಕ ರಕ್ಷಣವೇದಿಕೆ ಸಿಂಹಸೇನೆಯ ಮಧುಸೂಧನ್ ಅವರು ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ದಸರಾ ಮೆರವಣಿಗೆಗಾಗಿ ಸಕ್ರೆಬೈಲು ಆನೆಗಳನ್ನು ನೀಡದಂತೆ ಒತ್ತಾಯಿಸಿದ್ದಾರೆ.

ಮನವಿಯಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಇತ್ತೀಚೆಗೆ ಸಂಭವಿಸಿರುವ ಆನೆಗಳ ಸಾವಿನ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. 32 ವರ್ಷ ವಯಸ್ಸಿನ ಶೌರ್ಯ ಆನೆ ಸೆಪ್ಟೆಂಬರ್ 30ರಂದು ಮೃತಪಟ್ಟಿರುವುದು ವನ್ಯಜೀವಿ ಪ್ರಿಯರು ಹಾಗೂ ಪರಿಸರ ಹೋರಾಟಗಾರರಲ್ಲಿ ತೀವ್ರ ನೋವುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಕ್ರೆಬೈಲು ಆನೆ ಬಿಡಾರದಲ್ಲಿ ವಿಕ್ರಾಂತ್, ಬಾಲಣ್ಣ ಸೇರಿದಂತೆ ಆನೆಗಳಿಗೆ ಗಾಯಗಳಾಗಿವೆ. ಈ ಹಿಂದೆ ಭಾಗಿಯಾಗಿದ್ದ ಕುಂತಿಗೆ ಇದೇ ವಿಜಯ ದಶಮಿ ಮೆರವಣಿಗೆ ದಿಬದ ಎರಡು ದಿನಗಳ ಹಿಂದೆ ಮರಿಆನೆಗೆ ಜನ್ಮನೀಡಿತ್ತು. ಕಳೆದ ವರ್ಷ ಬಾಲಣ್ಣ ಇದೇ ವಿಜಯದಶಮಿಯ ವೇಳೆ ಕಾಲುನೋವು ಬಂದ ವೇಳೆ ಪೇನ್ ಕಿಲ್ಲರ್ ಕೊಟ್ಟ ಕಾರಣ ಅದರ ಕಿವಿಯೇ ಕೊಳೆತು ಹೋಗಿ ಜೀವನ್ಮರಣದಿಂದ ಹೋರಾಡಿ ಈಗ ಸಾವಿನ ದವಡೆಯಿಂದ ಬಜಾವ್ ಆಗಿರುವ ಘಟನೆಗಳು ನಡೆದಿದ್ದು, ಕಡಿಮೆ ಅವಧಿಯಲ್ಲಿ ಆನೆಗಳ ಸಾವು ಪುನರಾವರ್ತನೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ದಸರಾ ಹಬ್ಬದ ಸಂದರ್ಭದಲ್ಲಿ ಆನೆಗಳನ್ನು ಮೆರವಣಿಗೆಗೆ ಕಳುಹಿಸುವ ನಿರ್ಧಾರವನ್ನು ಮರುಪರಿಶೀಲಿಸಿ, ಸಕ್ರೆಬೈಲು ಬಿಡಾರದ ಆನೆಗಳನ್ನು ಜಾಥಾದಲ್ಲಿ ಬಳಸುವುದನ್ನು ತಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Leave a Reply

Your email address will not be published. Required fields are marked *