ಬೆಂಗಳೂರು ನ್ಯೂಸ್…

ನವೆಂಬರ್‌ 19: ಮುಂಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆಗಳಲ್ಲಿ ಸೋಲಿನ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ರೈತರ ಅಭಿಪ್ರಾಯಕ್ಕಿಂತಲೂ ಚುನಾವಣೆಯೇ ಮುಖ್ಯ ಎನ್ನುವುದನ್ನ ಪರೋಕ್ಷವಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಕೆಂಗಲ್‌ ಶ್ರೀಪಾದ ರೇಣು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಉಪಚುನಾವಣೆಗಳಲ್ಲಿ ಸೋತಿದ್ದಕ್ಕೆ ಬುದ್ದಿ ಕಲಿತು ಡಿಸೇಲ್‌ ಮತ್ತು ಪೆಟ್ರೋಲ್‌ ದರಗಳನ್ನು ಬಿಜೆಪಿ ಸರಕಾರ ಇಳಿಸಿತ್ತು. ಕಳೆದೊಂದು ವರ್ಷದಿಂದ ಸತತವಾಗಿ ಪ್ರತಿಭಟನೆ ಮಾಡುತ್ತಿರುವ ರೈತರ ಆಕ್ರೋಶ ಮುಂದಿನ ಉತ್ತರಪ್ರದೇಶ‌ ಹಾಗೂ ಪಂಜಾಬ್ ಚುನಾವಣೆಯಲ್ಲಿ ವ್ಯಕ್ತವಾಗುತ್ತದೆ ಎನ್ನುವ ಹಿನ್ನಲೆಯಲ್ಲಿ ಕೃಷಿ ಮಸೂದೆಗಳನ್ನು ವಾಪಸ್ಸು ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಕೊನೆಗೂ ರೈತರ ಹೋರಾಟಕ್ಕೆ ನ್ಯಾಯ ದೊರಕಿದಂತಾಗಿದೆ. ಅಲ್ಲದೆ, ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದರಿಂದ ಮಾತ್ರ ಅಚ್ಚೇದಿನ್‌ ಸಾಧ್ಯ ಎನ್ನುವುದು ಮತ್ತೊಮ್ಮೊ ಸಾಬೀತಾಗಿದೆ ಎಂದು ಹೇಳಿದರು.

ಹಿಂದುತ್ವವಾದಿಗಳು ಹೂಡೂ ಆರ್ಥಿಕತೆಯನ್ನು ಪ್ರತಿಪಾದಿಸುತ್ತಾರೆ. ಇದು ಜನರನ್ನು ವಿಭಜಿಸುತ್ತದೆಯೇ ಹೊರತು ಒಗ್ಗೂಡಿಸುವ ಆದರ್ಶಗಳನ್ನು ಹೊಂದಿಲ್ಲ. ದೇಶದ ಜನರು ಒಳ್ಳೆಯ ದಿನಗಳನ್ನು ಕಾಣಬೇಕಾದಲ್ಲಿ ಬಿಜೆಪಿಯನ್ನು ಸೋಲಿಸುವುದು ಮತದಾರರ ಕರ್ತವ್ಯವಾಗಿದೆ. ಅಲ್ಲದೆ, ಮುಂಬರುವ ಉತ್ತರಪ್ರದೇಶ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನರು ಸೋಲಿಸಿದಲ್ಲಿ ದೇಶಾದ್ಯಂತ ಪೆಟ್ರೋಲ್‌ ಮತ್ತು ಡಿಸೇಲ್‌ ಇಂಧನಗಳ ಮೇಲಿನ ತೆರಿಗೆಯನ್ನ ಕೇಂದ್ರ ಸರಕಾರ ಗಣನೀಯವಾಗಿ ಇಳಿಸುವ ಮನಸ್ಸು ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ ಎಂದು ಕೆಪಿಸಿಸಿ ವಕ್ತಾರರಾದ ಕೆಂಗಲ್‌ ಶ್ರೀಪಾದ ರೇಣು ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…