ಶಿವಮೊಗ್ಗ: ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರವಾಗಲಿದೆ ಎಂದು ಹಿರಿಯ ಲೆಕ್ಕ ಪರಿಶೋಧಕ ಜಿ.ವಿ. ಕೃಷ್ಣ ಹೇಳಿದ್ದಾರೆ.ಅವರು ಇಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ನಗರದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆತ್ಮನಿರ್ಭರ ಅರ್ಥ ವ್ಯವಸ್ಥೆ ಒಂದು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

2022 -23 ನೇ ಸಾಲಿನ ಕೇಂದ್ರ ಬಜೆಟ್ 14 ಪ್ರಮುಖ ಅಂಶಗಳೊಂದಿಗೆ ದೇಶದ ಅಭಿವೃದ್ದಿಗೆ ಪೂರಕವಾಗಿ ರೂಪಿಸಲಾಗಿದೆ. ದೇಶದ ಅಭಿವೃದ್ಧಿ ಯಾವ ರೀತಿ ಆಗುತ್ತಿದೆ, ಹಿಂದೆ ಹೇಗಿತ್ತು, ಮುಂದೆ ಹೇಗಾಗಬೇಕು ಎನ್ನುವ ದೃಷ್ಠಿಯಿಂದ ಸಮರ್ಪಕವಾಗಿ ಅಧ್ಯಯನ ಮಾಡಿ ಬಜೆಟ್ ತಯಾರಿಸಲಾಗಿದೆ ಎಂದರು.ಬಜೆಟ್ ಬಗ್ಗೆ ಕೆಲವರಲ್ಲಿ ಅಸಮಾಧಾನಗಳು ಇರಬಹುದು. ಆದರೂ, ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ದೇಶದ ಒಟ್ಟಾರೆ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಲು ಪೂರಕವಾದ ಸಿದ್ಧತೆ ನಡೆದಿದೆ ಎಂದರು.

ಕೈಗಾರಿಕಾ ವಲಯದಲ್ಲಿ 30 ಲಕ್ಷ ಕೋಟಿ ರೂ.ನಷ್ಟು ಹೆಚ್ಚಿನ ಉತ್ಪಾದನೆ ಮಾಡಲು ಉತ್ಪಾದನಾ ವಲಯಕ್ಕೆ ಬೇಕಾದ ಬಂಡವಾಳ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಉದ್ಯೋಗ ಸೃಷ್ಠಿ, ಉದ್ಯೋಗಾವಕಾಶ ಹೆಚ್ಚಳಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಸಂವಾದದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಸಂಘದ ಸದಸ್ಯರು ಬಜೆಟ್ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ ಬಜೆಟ್ ಕುರಿತಾದ ಗೊಂದಲ ಪರಿಹರಿಸಿಕೊಂಡರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕಾರ್ಯಕಾರಿ ಸಮಿತಿ ಚೇರ್ಮನ್ ಬಿ.ಆರ್. ಸಂತೋಷ್, ಪ್ರಧಾನ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಗೋಪಿನಾಥ್, ವಿಜಯಕುಮಾರ್, ಮಧುಸೂದನ್ ಐತಾಳ್, ಜಗದೀಶ್ ಮಾತನವರ್, ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…