ಶಿವಮೊಗ್ಗ: ಜಗತ್ತಿನಲ್ಲಿ ಮನುಕುಲದ ಸೇವೆಯಲ್ಲಿ ಹಾಗೂ ಸೇವಾ ಚಟುವಟಿಕೆ ಕ್ಷೇತ್ರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಅಧ್ಯಕ್ಷ ಎಸ್.ಪಿ.ದಿನೇಶ್ ಹೇಳಿದರು.

ನಗರದ ಜೆಪಿಎನ್ ರಸ್ತೆಯಲ್ಲಿ ಇರುವ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ “ವಿಶ್ವ ರೆಡ್‌ಕ್ರಾಸ್ ದಿನಾಚರಣೆ” ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರ ಪಾಲಿಗೆ ರೆಡ್‌ಕ್ರಾಸ್ ಸಂಸ್ಥೆಯು ಸಂಜೀವಿನಿ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸೇವೆಯನ್ನೇ ಮಹತ್ತರ ಉದ್ದೇಶವಾಗಿ ಪರಿಗಣಿಸಿ ರೆಡ್‌ಕ್ರಾಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆ ಕೇವಲ ಯುದ್ಧ ಕಾಲದಲ್ಲಿ ಮಾತ್ರ ನೆರವಾಗದೇ ಎಲ್ಲ ಕ್ಷೇತ್ರಗಳಲ್ಲಿ ನೊಂದವರಿಗೆ ನೆರವಾಗಿ ಸಹಾಯ ಹಸ್ತ ನೀಡುತ್ತಿದೆ. ಅನಾರೋಗ್ಯಪೀಡಿತರಿಗೆ ಗಾಯಾಳುಗಳಿಗೆ, ಜೀವನ್ಮರಣದ ಸ್ಥಿತಿಯಲ್ಲಿ ಇರುವವರಿಗೆ ಸಂಸ್ಥೆ ಸಂಜೀವಿನಿಯಾಗಿದೆ. ರೆಡ್‌ಕ್ರಾಸ್ ಸಂಸ್ಥೆ ಸ್ಥಾಪಿಸಿದ ಹೆನ್ರಿ ಡ್ಯುನಾಂಟ್ ಜನ್ಮದಿನದಂದು ವಿಶ್ಯಾದ್ಯಂತ ರೆಡ್‌ಕ್ರಾಸ್ ದಿನವಾಗಿ ಆಚರಿಸಲಾಗುತ್ತದೆ. ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ನೆರವು ಒದಗಿಸುವ ಶ್ರೇಷ್ಠ ಕಾರ್ಯ ನಡೆಸಲಾಗುತ್ತದೆ ಎಂದರು.

ಶಿವಮೊಗ್ಗ ರೆಡ್‌ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಅವರು ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. ನಂತರ ಮಾತನಾಡಿ, ಶಿವಮೊಗ್ಗ ರೆಡ್‌ಕ್ರಾಸ್ ಸಂಸ್ಥೆ ಈಗಾಗಲೇ ಜಿಲ್ಲಾದ್ಯಂತ ಆಹಾರ ಕಿಟ್‌ಗಳ ವಿತರಣೆ, ಹೊಲಿಗೆ ಯಂತ್ರಗಳ ವಿತರಣೆ, ಕೋವಿಡ್ ಸಂದರ್ಭದಲ್ಲಿ ಪ್ರತಿ ನಿತ್ಯ ಮಾಸ್ಕ್ ಹಾಗೂ ಸ್ಯಾನಿಟೈಸರ್, ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡುವ ಮೂಲಕ ಸೇವಾ ಕಾರ್ಯಗಳನ್ನು ನಡೆಸಿತ್ತು. ಮುಂದಿನ ದಿನಗಳಲ್ಲಿಯು ಸೇವೆಗಳನ್ನು ನಿರಂತರವಾಗಿ ಮಾಡಲಿದೆ ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆ ಸ್ಥಾಪಕ ಹೆನ್ರಿ ಡ್ಯೂನಾಂಟ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಮಾರಂಭದಲ್ಲಿ ರೆಡ್‌ಕ್ರಾಸ್ ಪದಾಧಿಕಾರಿಗಳು ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದರು. ನಿರ್ದೇಶಕರಾದ ಧರಣೇಂದ್ರ ದಿನಕರ್, ಜಿ.ವಿಜಯ್‌ಕುಮಾರ್, ವಸಂತ್ ಹೋಬಳಿದಾರ್, ಆರ್.ಗಿರೀಶ್, ನವೀನ್, ಪೂಜಾ, ಮಂಜುನಾಥ್, ಅಲ್ಲಾಭಕ್ಷಿ ಹಾಗೂಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…