ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಹಗುರವಾಗಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕೆ.ಚೇತನ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನಾಡಗೀತೆಗೆ ಅವಮಾನ ಮಾಡುವುದೆಂದರೆ ನಾಡಿನ ಸರ್ವ ಜನಾಂಗಕ್ಕೆ ಹಾಗೂ ಸರ್ಕಾರಕ್ಕೆ ಮಾಡುವ ಅವಮಾನವಾಗಿದೆ. ನಾಡಿನ ಆರೂವರೆ ಕೋಟಿ ಕನ್ನಡಿಗರು ಸ್ವೀಕರಿಸಿರುವ ನಾಡಗೀತೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರಿಯಲ್ಲ’ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರಕವಿ, ಜಗದ ಕವಿ, ಯುಗದ ಕವಿ ಎಂದು ಖ್ಯಾತಿ ಪಡೆದ ಕುವೆಂಪು ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದು ಖಂಡನೀಯ. ಇದು ಯಾರೂ ಒಪ್ಪುವಂತದ್ದಲ್ಲ. ನಾಡಗೀತೆಗೆ ಅವಮಾನ ಮಾಡಿರುವ ವ್ಯಕ್ತಿಯನ್ನು ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಕುವೆಂಪು ದೇವರು ಮತ್ತು ಧರ್ಮವನ್ನು ಸ್ವಾರ್ಥಕ್ಕೆ ಬಳಸುವವರ ವಿರುದ್ಧ ತಮ್ಮ ಕೃತಿಗಳಲ್ಲಿ ಖಂಡಿಸಿದ್ದರು. ವೈಚಾರಿಕತೆ ಮತ್ತು ಜ್ಞಾನಕ್ಕೆ ಅಪಾರ ಗೌರವ ನೀಡುತ್ತಿದ್ದರು. ರೋಹಿತ್ ಚಕ್ರತೀರ್ಥ ಅವರು ನಾಡಗೀತೆಗೆ ತೋರಿಸಿರುವ ಅಗೌರವಕ್ಕೆ ದೇಶ– ವಿದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದನ್ನು ಸರ್ಕಾರ ಗಮನಿಸಬೇಕು ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ನಾಗೇಶ್ ಹಾಗೂ ಸಂಬಂಧಪಟ್ಟ ಸಚಿವರು ಈ ಕೃತ್ಯವನ್ನು ಖಂಡಿಸಬೇಕು. ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಚಕ್ರತೀರ್ಥ ಅವರು ಕೂಡಲೇ ನಾಡಿನ ಜನರ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ನಾಡಪ್ರೇಮಿಗಳು ರಾಜ್ಯದಾದ್ಯಂತ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಚೇತನ್ ಎಚ್ಚರಿಸಿದ್ದಾರೆ.