ಶಿವಮೊಗ್ಗ: ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಇಂದು ಪಾಲಿಕೆ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಆಸ್ತಿ ತೆರಿಗೆ ಅವೈಜ್ಞಾನಿಕವಾಗಿ ನಿರ್ಧರಿಸಲಾಗಿದೆ. ಇದರಿಂದ ತೆರಿಗೆದಾರರ ಮೇಲೆ ಹೊರೆಯಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಿತವನ್ನೇ ಕಡೆಗಣಿಸಲಾಗುತ್ತಿದೆ. ತಕ್ಷಣವೇ ತೆರಿಗೆಯನ್ನು ವಾಪಸ್ ತೆಗೆದುಕೊಂಡು ಹಳೆ ತೆರಿಗೆಯನ್ನೇ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಪಾಲಿಕೆ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜನ ಈಗಾಗಲೇ ಸಂಕಷ್ಟದ ಸಂದರ್ಭದಲ್ಲಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ನೀರಿನ ಮತ್ತು ಆಸ್ತಿ ತೆರಿಗೆಯನ್ನು ನಾಲ್ಕೈದು ಪಟ್ಟು ಹೆಚ್ಚಿಸಲಾಗಿದೆ. 10 ಸಾವಿರ ರೂ. ಕಟ್ಟುತ್ತಿದ್ದವರು ಈಗ 45 ಸಾವಿರ ರೂ. ಕಟ್ಟಬೇಕಿದೆ. 25 ಸಾವಿರ ರೂ. ಕಟ್ಟುತ್ತಿದ್ದವರು 1 ಲಕ್ಷ ರೂ. ಕಟ್ಟಬೇಕಿದೆ. ಎಸ್.ಆರ್. ದರ ಹೆಚ್ಚಿಸಿದಂತೆ ತೆರಿಗೆಯನ್ನೂ ಏರಿಕೆ ಮಾಡಲಾಗ್ತಿದೆ. ಸ್ವಂತ ಮನೆಯವರೂ ಕೂಡ ಬಾಡಿಗೆ ಮನೆಯವರಂತೆ ಬಾಡಿಗೆ ಕಟ್ಟಬೇಕಾಗುತ್ತದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದೆ. ಮನಸ್ಸಿಗೆ ಬಂದಂತೆ ತೆರಿಗೆಗಳನ್ನು ಏರಿಕೆ ಮಾಡುತ್ತಿದೆ. ಜೊತೆಗೆ ಭ್ರಷ್ಟಾಚಾರದಲ್ಲಿ ತೊಡಗಿದೆ. ಶೇಕಡ 40 ರ ಕಮಿಷನ್ ಎಲ್ಲಾ ಕಾಮಗಾರಿಗಳಲ್ಲೂ ಸಾಮಾನ್ಯವಾಗಿದೆ. ಮಹಾನಗರ ಪಾಲಿಕೆ ಈಗ ಮತ್ತೆ ತೆರಿಗೆಯನ್ನು ಏರಿಸಿ ಸ್ವಲ್ಪ ಮಟ್ಟಿಗೆ ಇಳಿಸುವ ಜಾಣ್ಮೆ ತೋರಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಸುಲಭ ದರದ ತೆರಿಗೆ ವಿಧಿಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ಪ್ರಮುಖರಾದ ಯಮುನಾ ರಂಗೇಗೌಡ, ರೇಖಾ ರಂಗನಾಥ್, ಹೆಚ್.ಸಿ. ಯೋಗೀಶ್, ರಮೇಶ್ ಹೆಗ್ಡೆ, ಮೆಹಖ್ ಶರೀಫ್, ರಾಮೇಗೌಡ, ಹೆಚ್.ಪಿ. ಗಿರೀಶ್, ವಿಜಯಲಕ್ಷ್ಮಿ ಪಾಟೀಲ್, ಇಕ್ಕೇರಿ ರಮೇಶ್, ಸ್ಟೆಲ್ಲಾ ಮಾರ್ಟಿನ್, ಎನ್.ಡಿ. ಪ್ರವೀಣ್, ಪ್ರವೀಣ್, ಕುಮರೇಶ್, ಚಂದ್ರಶೇಖರ್, ದರ್ಶನ್, ಪುಷ್ಪಕುಮಾರ್, ರೇಷ್ಮಾ, ಸುಮಾ, ಲಕ್ಷ್ಮಿ, ತಬಸ್ಸುಮ್, ನಾಜಿಮಾ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…