ಶಿವಮೊಗ್ಗ: ಗೌರವಧನ ಬಿಡುಗಡೆಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಮತ್ತು ಸಹಾಯಕರ ಸಂಘದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಕಳೆದ ಮೂರು ತಿಂಗಳಿಂದ ಗೌರವಧನ ನೀಡಿಲ್ಲ. ಅಲ್ಲದೆ, ಮಕ್ಕಳಿಗೆ ನೀಡುವ ಕೋಳಿ ಮೊಟ್ಟೆ ಹಣ ಮತ್ತು ಸಾದಿಲ್ವಾರು ಹಣ ಕೂಡ ಪಾವತಿಯಾಗಿಲ್ಲ. ಪ್ರತಿವರ್ಷ ಮಾರ್ಚ್‍ನಿಂದ ಮೇ ತಿಂಗಳ ತನಕ ಸಮಸ್ಯೆ ಇರುತ್ತಿತ್ತು. ಆದರೆ ಈ ವರ್ಷ ಜೂನ್ ತಿಂಗಳಾದರೂ ಗೌರವಧನ ಇನ್ನೂ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಅನುದಾನವಿಲ್ಲ ಎಂದು ಸಬೂಬು ಹೇಳುತ್ತಾರೆ. ಕೇಂದ್ರ ಕಚೇರಿಯಲ್ಲಿ ಕೇಳಿದರೆ ವಿಧಾನವೇ ಬದಲಾಗಿದೆ ಎನ್ನುತ್ತಾರೆ. ವಿಧಾನ ಬದಲಾವಣೆ ತಿಂಗಳು ತಿಂಗಳು ಕೊಡುವ ವೇತನ ಪಾವತಿಗೆ ಅಡಚಣೆಯಾಗದಂತೆ ಮಾಡುವುದು ಇಲಾಖೆಯ ಕರ್ತವ್ಯವಾಗಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡದೇ ಸತಾಯಿಸುತ್ತಿದೆ. ಅಂಗನವಾಡಿ ನೌಕರರು ತುಂಬಾ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಕ್ಷಣವೇ ಬಾಕಿ ವೇತನ ನೀಡಬೇಕು ಮತ್ತು ಪ್ರತಿ ತಿಂಗಳು ವೇತನ ಪಾವತಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ತುಳಸಿಪ್ರಭಾ, ಕಾರ್ಯದರ್ಶಿ ನಾಗರತ್ನ, ಖಜಾಂಚಿ ಶೈಲಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…