ಎಲ್ಲರನ್ನು ಸಮಾನವಾಗಿ ಕಾಣುವುದು ಕೂಡ ಮಾನವ ಹಕ್ಕಾಗಿದ್ದು, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರ್ಥ ಮಾಡಿಕೊಂಡು ಬೇರೆಯವರ ಮಾನವ ಹಕ್ಕುಗಳನ್ನೂ ಗೌರವಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಮಾನವ ಹಕ್ಕುಗಳ ಆಯೋಗ, ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಡಿವಿಎಸ್ ಪದವಿಪೂರ್ವ(ಸ್ವತಂತ್ರ) ಕಾಲೇಜು, ಶಿವಮೊಗ್ಗ ಇವರ ಸಹಯೋಗದಲ್ಲಿ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಜೀವಿಸುವ ಹಕ್ಕು, ಉಚಿತ ಶಿಕ್ಷಣದ ಹಕ್ಕು. ದೌರ್ಜನ್ಯ ವಿರುದ್ದ ಹಕ್ಕು, ಆರೋಗ್ಯ ಹಕ್ಕು, ಸಮಾನತೆಯ ಹಕ್ಕು ಸೇರಿದಂತೆ ಮಾನವ ಹಕ್ಕುಗಳ ವ್ಯಾಪ್ತಿ ಬಹು ವಿಸ್ತಾರವಾಗಿದೆ. ಎಲ್ಲರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಇತರರ ಹಕ್ಕುಗಳನ್ನು ಗೌರವಿಸಬೇಕು ಎಂದ ಅವರು ವಿದ್ಯಾರ್ಥಿಗಳು ತಮ್ಮ ತಮ್ಮ ಗುರಿ ಸಾಧನೆ ಮಾಡುವುದು ಕೂಡ ಒಂದು ಕರ್ತವ್ಯವಾಗಿದೆ ಎಂದರು.
ವಿದ್ಯಾರ್ಥಿಗಳಾದ ನೀವು ನಿಮ್ಮ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಬಾಲ್ಯ ವಿವಾಹದ ಕುರಿತು ವಿಷಯ ತಿಳಿದಲ್ಲಿ, ಬಾಲ್ಯ ವಿವಾಹವಾಗುತ್ತಿರುವುದು ಕಂಡು ಬಂದಲ್ಲಿ ಸಂಸ್ಥೆಯ ಶಿಕ್ಷಕರು, ಮುಖ್ಯಸ್ಥರು ಹಾಗೂ ಯಾವುದೇ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಗುರು ಹಿರಿಯರು, ತಂದೆ ತಾಯಿಯರೊಂದಿಗೆ ಗೌರವದಿಂದ ನಡೆದುಕೊಂಡು, ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೆಕು. ದೊಡ್ಡ ಗುರಿಗಳನ್ನು ಹೊಂದಿ, ಸಾಧಿಸಿಯೇ ತೀರುತ್ತೇನೆಂದು ಪಣ ತೊಟ್ಟು ಈ ನಿಟ್ಟಿನಲ್ಲಿ ಸಾಗಿದರೆ ಶೇ.100 ರಷ್ಟು ಗುರಿಯನ್ನು ಸಾಧಿಸಬಹುದು. ಆ ಗುರಿ ಸಾಧನೆಗೆ ನಾವೇ ದಾರಿ ಕಂಡುಕೊಳ್ಳಬೇಕು. ಸಮಯಪಾಲನೆ, ಏಕಾಗ್ರತೆಯಿಂದ ಪಠ್ಯ ವಿಷಯಗಳನ್ನು ಕೇಳಿ, ಅಭ್ಯಾಸ ಮಾಡಬೇಕು. ಸಮಸ್ಯೆಗಳಿದ್ದರೆ ಶಿಕ್ಷಕರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

2004 ರಲ್ಲಿ ನಾನು ಇದೇ ಡಿವಿಎಸ್ ಸ್ವತಂತ್ರ ಕಾಲೇಜಿನಲ್ಲಿ ಪಿಯುಸಿ ಮಾಡಿದ್ದೆ. ಅತ್ಯಂತ ಉತ್ತಮವಾಗಿ, ಶ್ರದ್ದೆಯಿಂದ ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ದವಾಗಿ ಕಲಿಸುತ್ತಿದ್ದರು. ಟ್ಯೂಷನ್‌ಗೆ ಹೋಗುವ ಅವಶ್ಯಕತೆಯೇ ಇರಲಿಲ್ಲ. ಇಂತಹ ಸಂಸ್ಥೆಗಳಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳು ಬರುತ್ತಾರೆ, ಶಿಕ್ಷಕರು ಸÀಹ ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ. ಈ ಸಂದರ್ಭದಲ್ಲಿ ನನಗೆ ಪಾಠ ಮಾಡಿ ದಾರಿ ತೋರಿದ ಎಲ್ಲ ಗುರುಗಳನ್ನು ಸ್ಮರಿಸುತ್ತೇನೆ.

ಎನ್.ಹೇಮಂತ್, ಜಿ.ಪಂ ಸಿಇಓ

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಮಾನವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಾನವ ಹಕ್ಕುಗಳು ಎಂದರೆ ನೈಸರ್ಗಿಕವಾಗಿ ಬಂದಿರುವ ಹಕ್ಕುಗಳಾಗಿವೆ. ಮಾನವ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದು ಬೇರೆಯವರ ಹಕ್ಕುಗಳನ್ನು ಹಾಗೂ ನಿಬಂಧನೆಗಳನ್ನೂ ಗೌರವಿಸಬೇಕು.
ಪ್ರಸ್ತುತ ಜಗತ್ತಿನಲ್ಲಿ ಮಾಹಿತಿ ಸ್ಫೋಟವಾಗುತ್ತಿದೆ. ಒಂದು ವ್ಯವಸ್ಥೆಯಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಒಳ್ಳೆಯದಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ವಿಷಯಗಳನ್ನು ಸಲೀಸಾಗಿ ಮತ್ತು ಅತಿ ಶೀಘ್ರವಾಗಿ ತಲುಪಿಸಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಅತಿ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

ವಾಹನ ಪರವಾನಗಿ ಇಲ್ಲದೇ ವಾಹನ ಚಲಾವಣೆ ಮಾಡಬಾರದು. ತಂದೆ ತಾಯಿಯೊಂದಿಗೆ ಹಠ ಮಾಡಿ ನೋಯಿಸಬಾರದು. ಹೀಗೆ ನೋಯಿಸುವುದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಗುರಿ ಸಾಧನೆಯೆಡೆ ಹೆಚ್ಚಿನ ಗಮನ ಹರಿಸಬೇಕೆಂದರು.

ನನ್ನ ಹಕ್ಕು ನಿಮ್ಮ ಕರ್ತವ್ಯ ಹಾಗೆಯೇ ನಿಮ್ಮ ಹಕ್ಕು ನನ್ನ ಕರ್ತವ್ಯ ಎನ್ನುವ ಹಾಗೆ ಬದುಕಬೇಕು. ಆಗ ಮಾನವ ಹಕ್ಕುಗಳು ಗೌರವಯುತವಾಗಿ ನೆಲೆಸಲು ಸಾಧ್ಯವಾಗುತ್ತದೆ. ಜೊತೆಗೆ ನಮ್ಮ ಹಕ್ಕುಗಳ ಮಿತಿಯನ್ನು ಅರಿತಾಗ ಉತ್ತಮವಾದ ಸಮಾಜ ರಕ್ಷಣೆ ಮಾಡಿ ಮುನ್ನಡೆಯಲು ಸಾಧ್ಯವಾಗುತ್ತದೆ.

ಸಂತೋಷ್ ಎಂ ಎಸ್, ಹಿರಿಯ ಸಿವಿಲ್ ನ್ಯಾಯಾಧೀಶರು

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿ, ಎಲ್ಲ ನಾಗರೀಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನ ಬಗ್ಗೆ ಮುಖ್ಯವಾಗಿ ತಿಳಿದುಕೊಳ್ಳಬೇಕು. ಹಕ್ಕುಗಳೊಂದಿಗೆ ತಮ್ಮ ಕರ್ತವ್ಯಗಳ ಬಗ್ಗೆಯೂ ತಿಳಿದುಕೊಳ್ಳುವುದು ಅತಿ ಅವಶ್ಯಕ. ಮಾನವ ಹಕ್ಕುಳಗ ರಕ್ಷಣೆಗೆ ಅನೇಕ ಕಾನೂನುಗಳಿದ್ದು ಅವುಗಳನ್ನು ತಿಳಿದುಕೊಳ್ಳಬೇಕು ಎಂದ ಅವರು ನಮ್ಮ ಸಂವಿಧಾನವನ್ನು ಓದಿ ಅದರಂತೆ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್‌ಪಿ ರಮೇಶ್ ಕುಮಾರ್, ಡಿಡಿಪಿಯು ಚಂದ್ರಪ್ಪ ಎಸ್ ಗುಂಡಪಲ್ಲಿ
ಡಿವಿಎಸ್ ಅಧ್ಯಕ್ಷರಾದ ಕೆ.ಎನ್.ರುದ್ರಪ್ಪ ಕೊಳಲೆ, ಕಾರ್ಯದರ್ಶಿ ಎಸ್ ರಾಜಶೇಖರ್, ಸಹ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಡಿವಿಎಸ್ ಸ್ವತಂತ್ರ ಕಾಲೇಜಿನ ಪ್ರಾಂಶುಪಾಲರಾದ ಸವಿತ ಎನ್ ರಾವ್ ಉಪನ್ಯಾಸಕ ಮಂಜುನಾಥ ಬಣಕಾರ್, ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.