ಮಂಜುನಾಥ್ ಶೆಟ್ಟಿ…

ಬೆಂಗಳೂರು, 26 ಮಾರ್ಚ್ 2026: ರಾಜ್ಯದ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಾತಿಗೆ ಕಡ್ಡಾಯಗೊಳಿಸಲಾಗಿದ್ದ 6 ವರ್ಷದ ವಯೋಮಿತಿಯಲ್ಲಿ 60 ದಿನಗಳ (ಎರಡು ತಿಂಗಳು) ಸಡಿಲಿಕೆ ನೀಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರು ಇಂದು ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ವಯೋಮಿತಿ ನಿಯಮದಿಂದಾಗಿ ತಮ್ಮ ಮಕ್ಕಳ ಪ್ರವೇಶಾತಿಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ಆತಂಕಗೊಂಡು ಪರದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಈ ತುರ್ತು ನಿರ್ಧಾರವನ್ನು ಪ್ರಕಟಿಸಿದೆ.
ಪ್ರಕಟಣೆಯ ಪ್ರಮುಖ ಅಂಶಗಳು…
1ನೇ ತರಗತಿ ದಾಖಲಾತಿಗೆ 60 ದಿನಗಳ ವಿನಾಯಿತಿಯನ್ನು ನೀಡಲಾಗುತ್ತಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಇದು ಅನ್ವಯವಾಗಲಿದ್ದು, 6 ವರ್ಷ ತುಂಬಲು 60 ದಿನಗಳ ಕೊರತೆ ಇದ್ದರೂ ಅಂತಹ ಮಕ್ಕಳಿಗೆ ಪ್ರವೇಶಾತಿ ಲಭ್ಯವಾಗಲಿದೆ.
ಈ 60 ದಿನಗಳ ವಯೋಮಿತಿ ರಿಯಾಯಿತಿಯು ಕೇವಲ 1ನೇ ತರಗತಿಗೆ ಮಾತ್ರ ಸೀಮಿತವಾಗಿರದೆ, ಎಲ್‌ಕೆಜಿ (LKG) ಮತ್ತು ಯುಕೆಜಿ (UKG) ತರಗತಿಗಳ ದಾಖಲಾತಿಗೂ ಅನ್ವಯವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಶೀಘ್ರದಲ್ಲೇ ಶಾಶ್ವತ ಕಾನೂನು: ಪ್ರಸ್ತುತ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸೂಕ್ತ ನಿಯಂತ್ರಣ ವ್ಯವಸ್ಥೆ (Regulatory System) ಇಲ್ಲದಿರುವುದರಿಂದ ಆಗಿಂದಾಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ. ಪ್ರತಿ ವರ್ಷ ಸುತ್ತೋಲೆ ಹೊರಡಿಸುವ ಬದಲು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಶೀಘ್ರದಲ್ಲೇ ಹೊಸ ನಿಯಮಾವಳಿ ಹಾಗೂ ಕಾನೂನನ್ನು ರೂಪಿಸಿ ಸದನದಲ್ಲಿ ಮಂಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
“ಪೋಷಕರು ಆತಂಕಪಡುವ ಅಗತ್ಯವಿಲ್ಲ”
“ಮಕ್ಕಳ ದಾಖಲಾತಿ ವಿಚಾರದಲ್ಲಿ ಪೋಷಕರು ಗಾಬರಿಗೊಂಡು ಶಾಲೆಯಿಂದ ಶಾಲೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಅನ್ವಯವಾಗುವಂತೆ ಈ 60 ದಿನಗಳ ವಿನಾಯಿತಿಯನ್ನು ನೀಡಲಾಗಿದೆ. ಪೋಷಕರು ಇನ್ನು ಮುಂದೆ ಯಾವುದೇ ಆತಂಕಪಡುವ ಅಗತ್ಯವಿಲ್ಲ,” ಎಂದು ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ತಿಳಿಸಿದರು.
ಇದೇ ವೇಳೆ, ಸರ್ಕಾರದ ಈ ನಿರ್ಧಾರವನ್ನು ಶಾಸಕರಾದ ಶ್ರೀ ಅರವಿಂದ್ ಬೆಲ್ಲದ ಸ್ವಾಗತಿಸಿದ್ದು, ಇದನ್ನು ಶಾಶ್ವತ ಕಾನೂನಾಗಿ ಜಾರಿಗೆ ತರುವ ಸರ್ಕಾರದ ನಡೆಯನ್ನು ಶ್ಲಾಘಿಸಿದರು.