ಮಂಜುನಾಥ್ ಶೆಟ್ಟಿ…

ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿನ (ಬಾಲಕರಿಗೆ ಮಾತ್ರ) ಆಯ್ಕೆ ಪೂರ್ವ ಸಿದ್ದತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಭ್ಯರ್ಥಿಗಳು ನಿಗದಿತ ನಮೂನೆ ಅರ್ಜಿಯನ್ನು ಆಯಾ ಜಿಲ್ಲೆಯ ಜಿಲ್ಲಾ/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದು ಅಥವಾ ವೆಬ್‌ಸೈಟ್ https://udupi.nic.in ರಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆಯ ಮೂಲಕ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಠಡಿ ಸಂ.:304, ಬಿ-ಬ್ಲಾಕ್, 2ನೇ ಮಹಡಿ, ರಜತಾದ್ರಿ, ಮಣಿಪಾಲ-576104, ಉಡುಪಿ ಜಿಲ್ಲೆ ದೂ. ಸಂ.:0820-2574881 ಇಲ್ಲಿಗೆ ಏ.27 ರೊಳಗಾಗಿ ಸಲ್ಲಿಸುವುದು.
ಅರ್ಹ ಅಭ್ಯರ್ಥಿಗಳನ್ನು ಮಹಾತ್ಮಗಾಂಧಿ ಮೈದಾನ, ಅಜ್ಜರಕಾಡು, ಉಡುಪಿ ಇಲ್ಲಿ ಮೇ.02 ರಂದು ಜರುಗುವ ರ‍್ಯಾಲಿಯಲ್ಲಿ ಆಯ್ಕೆ ಮಾಡಲಾಗುವುದು. ತರಬೇತಿ ಅವಧಿಯು ಒಟ್ಟು 4 ತಿಂಗಳುಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ, ಊಟ, ತರಬೇತಿ ವೆಚ್ಚ, ಒಂದು ಜೊತೆ ಟ್ರಾಕ್ ಸೂಟ್, ಶೂ ಹಾಗೂ ದೈಹಿಕ ತರಬೇತಿಯ ಸಮವಸ್ತ್ರ ಉಚಿತವಾಗಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಟ ವಾರ್ಷಿಕ ಆದಾಯ ಮಿತಿ ಪ್ರವರ್ಗ-1ಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಗಳಿಗೆ ರೂ. 1 ಲಕ್ಷ ಒಳಗೊಂಡಿರಬೇಕು. ಅಭ್ಯರ್ಥಿಯು 10 ನೇ ತರಗತಿಯನ್ನು ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಟ 33 ಅಂಕಗಳು ಮತ್ತು ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು. ಜನ್ಮ ದಿನಾಂಕ ಮತ್ತು ವಯಸ್ಸು 27/04/2026ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು 27/04/2006 ರಿಂದ 27/04/2009 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು. ಅಭ್ಯರ್ಥಿಗಳಿಗೆ ತರಬೇತಿಯನ್ನು ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ, ಹನೆಹಳ್ಳಿ, ಬಾರ್ಕೂರು, ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇಲ್ಲಿ ನೀಡಲಾಗುವುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ 08182-222129 ಹಾಗೂ 0820-2574881 ಗಳನ್ನು ಸಂಪರ್ಕಿಸುವುದು.
