ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದಲ್ಲಿ ಹಾಡುಹಗಲೇ ರೌಡಿ ಶೀಟರ್ ನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಲಷ್ಕರ್ ಮೊಹಲ್ಲಾದ ಮೊದಲನೇ ತಿರುವಿನಲ್ಲಿರುವ ಮನೆಯಲ್ಲಿ ಆಶ್ರಯ ಬಡಾವಣೆಯ ನಿವಾಸಿಯಾಗಿದ್ದ ರೌಡಿ ಶೀಟರ್ ನರಸಿಂಹ (36) ಎಂಬಾತನನ್ನು ವಾಹನದಲ್ಲಿ ಬೆನ್ನಟ್ಟಿಕೊಂಡು ಬಂದ ನಾಲ್ಕೈದು ಮಂದಿಯ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ನರಸಿಂಹ ಲಷ್ಕರ್ ಮೊಹಲ್ಲಾದ ಇಸ್ಪೀಟ್ ಆಡಿಸಲು ಬಂದಿದ್ದ ವೇಳೆ ಆರೋಪಿಗಳು ಆತನನ್ನು ಹಿಂಬಾಲಿಸಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇಸ್ಪೀಟ್ ಆಡಲು ಬಂದಿದ್ದವರನೆಲ್ಲಾ ಓಡಿಸಿ ದುಷ್ಕರ್ಮಿಗಳು ನರಸಿಂಹನ ಕೈಗಳನ್ನು ಕಡಿದು, ಮುಖವನ್ನು ವಿಕೃತಗೊಳಿಸಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಘಟನೆ ದ್ವೇಷದ ಹಿನ್ನೆಲೆಯಲ್ಲೇ ನಡೆದಿರಬಹುದು ಎಂಬ ಅನುಮಾನ ವೆಕ್ತವಾಗಿದೆ.

ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ. ನರಸಿಂಹ ವಿರುದ್ಧ ಈ ಹಿಂದೆ ಹಲವು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಹತ್ಯೆ ಪ್ರಕರಣಗಳ ಸಂಬಂಧ ದಾಖಲೆಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಭದ್ರಾವತಿಯ ಇಸ್ಪೀಟ್ ಅಡ್ಡೆಯಲ್ಲೂ ಈತನ ಹಫ್ತ ವಸೂಲಿ ಇತ್ತು ಎಂಬ ಗಾಳಿ ಮಾತು ಕೇಳಿ ಬರುತ್ತಿದೆ.

ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *