ಮಂಜುನಾಥ ಶೆಟ್ಟಿ…

ಶಿವಮೊಗ್ಗ ಜಿಲ್ಲೆಯ ಪೊಲೀಸರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗುವ ಘಟನೆಯೊಂದು ಜಿಲ್ಲೆಯ ಆಗುಂಬೆಯಲ್ಲಿ ನಡೆದಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ವೃದ್ಧ ಮಹಿಳೆಯೊಬ್ಬರು ಪ್ಲಾಸ್ಟಿಕ್ ಹೊದಿಕೆಯ ತಾತ್ಕಾಲಿಕ ಮನೆಯಲ್ಲಿ, ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಿರುವುದನ್ನು ಪೊಲೀಸರು ಗಮನಿಸಿದ್ದರು.

ಮನೆ-ಮನೆ ಪೊಲೀಸ್ ಭೇಟಿ ಕಾರ್ಯಕ್ರಮದ ವೇಳೆ ಈ ವಿಚಾರ ತಿಳಿದುಕೊಂಡ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವನಗೌಡ ಪಾಟೀಲ್ ಅವರು ಮುಂದಾಳತ್ವ ವಹಿಸಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಆಗುಂಬೆ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವೃದ್ಧೆಗೆ ಹೊಸ ಮನೆ ನಿರ್ಮಿಸಿಕೊಡುವ ಕಾರ್ಯ ಕೈಗೊಂಡರು.

ಆಗುಂಬೆ ವ್ಯಾಪ್ತಿಯಲ್ಲಿ ಸಂಚರಿಸಿದ್ದ ಒಂಟಿ ಸಲಗವು ವೃದ್ಧೆಯ ಮನೆಯ ಸಮೀಪವೇ ಹಾದು ಹೋಗಿದ್ದ ಹಿನ್ನೆಲೆಯಲ್ಲಿ ಅವರ ಸುರಕ್ಷತೆಯ ದೃಷ್ಟಿಯಿಂದಲೂ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು.

ನಿರ್ಮಾಣಗೊಂಡ ಮನೆಗೆ “ಲಯನ್ಸ್ ಕುಟೀರ” ಎಂದು ನಾಮಕರಣ ಮಾಡಲಾಗಿದೆ.ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ವೃದ್ಧ ಮಹಿಳೆಗೆ ಮನೆ ಹಸ್ತಾಂತರಿಸಿದರು.ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *