ಮಂಜುನಾಥ ಶೆಟ್ಟಿ…

ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ (ರಿ.) ಪದಾಧಿಕಾರಿಗಳು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು, ರಾಜ್ಯಾದ್ಯಂತ 1995 ರ ನಂತರ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳು ಕಳೆದ ಮೂರು ದಶಕಗಳಿಂದ ಯಾವುದೇ ಅನುದಾನವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದು, ಶಾಲೆಗಳು ಮುಚ್ಚುವ ಹಂತ ತಲುಪಿವೆ. ಈ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿದ್ದಾರೆ ಎಂದು ಸಚಿವರ ಗಮನಕ್ಕೆ ತಂದು ತಮ್ಮ ಅಳಲನ್ನು ತೋಡಿಕೊಂಡರು.

ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು, ಕನ್ನಡ ಶಾಲೆಗಳನ್ನು ಉಳಿಸುವುದು ನಮ್ಮೆಲ್ಲರ ಆದ್ಯತೆಯ ಕರ್ತವ್ಯ ಎಂದು ತಿಳಿಸಿದರು. ಅಲ್ಲದೆ, 1995 ರಿಂದ ಇವರೆಗಿನ ಕನ್ನಡ ಶಾಲೆಗಳು ಮತ್ತು ಕಾಲೇಜುಗಳಿಗೆ ವೇತನಾನುದಾನ ನೀಡುವ ಬೇಡಿಕೆಯ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ಆರ್ಥಿಕ ಇಲಾಖೆಯಿಂದ ಶೀಘ್ರವೇ ಅನುಮೋದನೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಸಭೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಜಿ. ಸಿ. ಶಿವಪ್ಪ, ಗೌರವಾಧ್ಯಕ್ಷರಾದ ಶ್ರೀ ರಾಜಕುಮಾರ ಕಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಶ್ರೀ ಐ.ಎಸ್. ಹೊರಗಿನ ಮಠ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *