ಮಂಜುನಾಥ ಶೆಟ್ಟಿ…
ಕೇಂದ್ರ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆಯಡಿ ಶೈಕ್ಷಣಿಕ ಸಾಲ ಪಡೆದ ಗ್ರಾಹಕರಿಂದ ನಿಯಮಬಾಹಿರವಾಗಿ ಹೆಚ್ಚುವರಿ ಬಡ್ಡಿ ವಸೂಲಿ ಮಾಡಿ, ಸೇವಾ ನ್ಯೂನತೆ ಎಸಗಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸನಗರ ಶಾಖೆಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.
ಸಾಗರ ತಾಲೂಕಿನ ಶಂಕರಪ್ರಸಾದ್ ಕೆ.ಎಸ್. ಎಂಬುವರು 2013 ರಲ್ಲಿ ಎಸ್‌ಬಿಐ ಹೊಸನಗರ ಶಾಖೆಯಲ್ಲಿ ಕೇಂದ್ರ ವಲಯ ಬಡ್ಡಿ ರಿಯಾಯಿತಿ ಯೋಜನೆ -2009 ರ ಅಡಿಯಲ್ಲಿ 4 ವರ್ಷದ ಪದವಿ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದರು. ನಿಯಮದ ಪ್ರಕಾರ ಸಾಲದ ಅವಧಿ ಮುಗಿಯುವವರೆಗೆ (30/05/2018) ಬರುವ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿತ್ತು.
ಆದರೆ, ಸಾಲದ ಅವಧಿ ಮುಗಿದ ನಂತರ ಬ್ಯಾಂಕ್‌ನವರು ಗ್ರಾಹಕರಿಂದ ನಿಯಮಬಾಹಿರವಾಗಿ ರೂ. 41,199/- ಗಳಷ್ಟು ಹೆಚ್ಚುವರಿ ಬಡ್ಡಿಯನ್ನು ವಸೂಲಿ ಮಾಡಿದ್ದರು. ಈ ಬಗ್ಗೆ ಗ್ರಾಹಕರು ಹಲವು ಬಾರಿ ಬ್ಯಾಂಕ್‌ಗೆ ಖುದ್ದಾಗಿ ಭೇಟಿ ನೀಡಿ ಹಾಗೂ ಇ-ಮೇಲ್ ಮೂಲಕ ಮನವಿ ಮಾಡಿದರೂ ಬ್ಯಾಂಕ್ ಯಾವುದೇ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ನೊಂದ ಗ್ರಾಹಕರು ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಆಯೋಗದ ಆದೇಶ…
ಉಭಯ ಪಕ್ಷಕಾರರ ವಾದ-ವಿವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಬ್ಯಾಂಕ್ ಸೇವಾ ನ್ಯೂನತೆ ಎಸಗಿರುವುದು ಸ್ಪಷ್ಟವಾಗಿದೆ ಎಂದು ತೀರ್ಪು ನೀಡಿದೆ. ಗ್ರಾಹಕರ ದೂರನ್ನು ಭಾಗಶಃ ಪುರಸ್ಕರಿಸಿ ಬ್ಯಾಂಕ್ ಗ್ರಾಹಕರಿಂದ ಕಾನೂನುಬಾಹಿರವಾಗಿ ವಸೂಲಿ ಮಾಡಿದ ರೂ. 41,199/- ಗಳನ್ನು ದಿನಾಂಕ: 31/07/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 7 ರ ಬಡ್ಡಿಯೊಂದಿಗೆ ಆದೇಶ ಬಂದ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ಪೂರ್ತಿ ಮೊತ್ತ ಪಾವತಿಯಾಗುವವರೆಗೆ ಶೇ. 10 ರಷ್ಟು ಬಡ್ಡಿ ನೀಡಬೇಕಾಗುತ್ತದೆ. ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ಹಿಂಸೆಗಾಗಿ ರೂ. 25,000/- ಪರಿಹಾರ ನೀಡಬೇಕು. ಹಾಗೂ ಪ್ರಕರಣದ ಕಾನೂನು ಹೋರಾಟದ ವೆಚ್ಚವಾಗಿ ₹10,000/- ಗಳನ್ನು ಗ್ರಾಹಕರಿಗೆ ನೀಡಬೇಕು.
ಒಂದು ವೇಳೆ ಈ ಪರಿಹಾರದ ಮೊತ್ತವನ್ನು 45 ದಿನಗಳ ಒಳಗಾಗಿ ಪಾವತಿಸದಿದ್ದರೆ, ಅದಕ್ಕೂ ವಾರ್ಷಿಕ ಶೇ. 10 ರಷ್ಟು ಬಡ್ಡಿಯನ್ನು ಸೇರಿಸಿ ನೀಡಬೇಕಾಗುತ್ತದೆ ಎಂದು
ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.