ಮಂಜುನಾಥ ಶೆಟ್ಟಿ…

ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ರಸ್ತೆ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ನಗರ ಸಂಚಾರ ಪೊಲೀಸರು ಕೈಗೊಂಡಿರುವ ವಿಶೇಷ ಕಾರ್ಯಾಚರಣೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಬೆಳಕಿಗೆ ಬಂದಿವೆ.ರಸ್ತೆ ಬದಿಯಲ್ಲಿ ಬಳಕೆಯಾಗದೆ ಬಿಟ್ಟುಹೋಗಿದ್ದ 59 ನಿರುಪಯುಕ್ತ ವಾಹನಗಳನ್ನು ಗುರುತಿಸಿ ನೋಟಿಸ್ ಅಂಟಿಸುವ ಕಾರ್ಯವೂ ಆರಂಭಿಸಲಾಗಿದೆ. ಮತ್ತೊಂದೆಡೆ ಬಸ್ಗಳ ತಪಾಸಣೆ ಮಧ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಮೂವರು ಚಾಲಕರ ಪತ್ತೆಯಾಗಿದ್ದಾರೆ.

ನಗರದಲ್ಲಿ ಒಟ್ಟು 45 ಬಸ್‌ಗಳ ತಪಾಸಣೆ ನಡೆಸಿದ ಸಂಚಾರ ಪೊಲೀಸರು ಚಾಲಕರ ದಾಖಲೆಗಳು, ವಾಹನಗಳ ಸುರಕ್ಷತಾ ವ್ಯವಸ್ಥೆ ಹಾಗೂ ಬ್ರೆತ್ ಅನಾಲೈಸರ್ ಮೂಲಕ ಮದ್ಯಪಾನ ಪರೀಕ್ಷೆ ನಡೆಸಿದರು. ಈ ವೇಳೆ ಮೂವರು ಚಾಲಕರು ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿರುವುದು ದೃಢಪಟ್ಟಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪ್ರಯಾಣಿಕರಿಗೆ ಪೊಲೀಸರ ಎಚ್ಚರಿಕೆ…

ಸಾರ್ವಜನಿಕರು ಬಸ್‌ಗೆ ಹತ್ತುವ ಮುನ್ನ ಚಾಲಕರ ವರ್ತನೆ, ಆರೋಗ್ಯ ಸ್ಥಿತಿ ಹಾಗೂ ಮದ್ಯದ ಅಮಲಿನ ಲಕ್ಷಣಗಳ ಬಗ್ಗೆ ಗಮನಹರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಅನುಮಾನಾಸ್ಪದ ಪರಿಸ್ಥಿತಿ ಕಂಡುಬಂದರೆ ತಕ್ಷಣ ಸಂಚಾರ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಪ್ರಯಾಣಿಕರ ಜಾಗೃತಿಯೂ ಅಪಘಾತಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ತಪಾಸಣೆ ವೇಳೆ ಬಸ್ ನಿಲ್ದಾಣ ಟ್ರಾಫಿಕ್ ಠಾಣೆಯ ಸಿಪಿಐ ದೇವರಾಜ್ ಅವರು ಖುದ್ದಾಗಿ ಬಸ್‌ಗಳಿಗೆ ಭೇಟಿ ನೀಡಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು. ಮಹಿಳೆಯರು ಯಾವುದೇ ತುರ್ತು ಪರಿಸ್ಥಿತಿ ಅಥವಾ ಕಿರುಕುಳ ಎದುರಾದರೆ ತಕ್ಷಣ ಪೊಲೀಸ್ ಸಹಾಯವಾಣಿ ಅಥವಾ ಸಮೀಪದ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ತಿಳಿಸಿದರು.

ನಗರದ ವಿವಿಧ ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ಬಳಕೆಯಾಗದೆ ಬಿಟ್ಟುಹೋಗಿರುವ ವಾಹನಗಳು ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಿಶೇಷ ಸಮೀಕ್ಷೆ ನಡೆಸಿದ್ದಾರೆ. ಈ ವೇಳೆ 59 ನಿರುಪಯುಕ್ತ ವಾಹನಗಳನ್ನು ಗುರುತಿಸಲಾಗಿದೆ.

ವಾಹನಗಳ ಮಾಲೀಕರಿಗೆ ವಾಹನಗಳನ್ನು ತೆರವುಗೊಳಿಸುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಖಿಲ್ ಅವರ ನಿರ್ದೇಶನದಂತೆ ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗಿದೆ. ನಿಗದಿತ ಅವಧಿಯೊಳಗೆ ವಾಹನಗಳನ್ನು ತೆರವುಗೊಳಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಬದಿಯಲ್ಲಿ ಬಿಟ್ಟುಹೋಗಿರುವ ನಿರುಪಯುಕ್ತ ವಾಹನಗಳ ಮಾಹಿತಿ ನೀಡುವಲ್ಲಿ ಸಾರ್ವಜನಿಕರೂ ಸಕ್ರಿಯವಾಗಿ ಸಹಕರಿಸುತ್ತಿದ್ದಾರೆ. ‘ಪಬ್ಲಿಕ್ ಐ’ (Public Eye) ಆಪ್ ಮೂಲಕ ಹಲವಾರು ನಿರುಪಯುಕ್ತ ವಾಹನಗಳ ಫೋಟೋಗಳನ್ನು ಸಾರ್ವಜನಿಕರು ರವಾನಿಸುತ್ತಿದ್ದು, ಬಂದಿರುವ ಪ್ರತಿಯೊಂದು ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ, ಸಾರ್ವಜನಿಕ ಸಾರಿಗೆಯ ಸುರಕ್ಷತೆ, ಮಹಿಳಾ ಪ್ರಯಾಣಿಕರ ಭದ್ರತೆ ಹಾಗೂ ರಸ್ತೆ ಬದಿಯ ನಿರುಪಯುಕ್ತ ವಾಹನಗಳ ತೆರವು ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇಂತಹ ವಿಶೇಷ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *