ಮಂಜುನಾಥ ಶೆಟ್ಟಿ…
ಶಿವಮೊಗ್ಗದ ನವಿಲೆಯಲ್ಲಿರುವ ಜವಾಹರಲಾಲ್ ನೆಹರು ನ್ಯೂ ಕಾಲೇಜ್ ಆಫ್ ಎಂಜಿನಿಯರಿಂಗ್ (JNNCE) ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ “ಯುಗ್ಮ ಟೆಕ್‌ಫೆಸ್ಟ್ 2.0 – ಮೇಧಾ ದೃಷ್ಟಿ” ಹೆಸರಿನ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಕೃತಕ ಬುದ್ಧಿಮತ್ತೆ (AI) ಹ್ಯಾಕಥಾನ್ ಅನ್ನು ಜುಲೈ 24 ಮತ್ತು 25 ರಂದು ಆಯೋಜಿಸಲಾಗಿದೆ.
ದೇಶದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಈ ಹ್ಯಾಕಥಾನ್ ಆಯೋಜಿಸಲಾಗಿದ್ದು, ನೈಜ ಜೀವನದ ಸಮಸ್ಯೆಗಳಿಗೆ ಎಐ ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳನ್ನು ರೂಪಿಸಲು ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯಲ್ಲಿ ಎರಡು ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ. ಮೊದಲನೆಯದು ವೈದ್ಯಕೀಯ ಚಿತ್ರಗಳ ಸುಧಾರಣೆ (AI for Medical Image Enhancement) ಆಗಿದ್ದು, ಎಕ್ಸ್-ರೇ, ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಚಿತ್ರಗಳನ್ನು ವಿಶ್ಲೇಷಿಸುವ ಬುದ್ಧಿವಂತ ಮಾದರಿಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಎರಡನೇ ವಿಭಾಗ ವಸ್ತು ಗುರುತಿಸುವಿಕೆ (AI for Object Detection) ಆಗಿದ್ದು, ಸ್ವಯಂಚಾಲಿತ ನ್ಯಾವಿಗೇಶನ್, ಸ್ಮಾರ್ಟ್ ನಿಗಾವ್ಯವಸ್ಥೆ ಹಾಗೂ ಕೈಗಾರಿಕಾ ಬಳಕೆಯ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದೆ.
ಭಾರತದ ಎಐಸಿಟಿಇ, ಯುಜಿಸಿ ಅಥವಾ ಎಂಎಚ್‌ಆರ್‌ಡಿ ಮಾನ್ಯತೆ ಪಡೆದ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಒಂದು ತಂಡದಲ್ಲಿ ಗರಿಷ್ಠ ನಾಲ್ವರು ಸದಸ್ಯರಿಗೆ ಅವಕಾಶವಿದ್ದು, ನೋಂದಣಿ ಶುಲ್ಕ 2,000 ನಿಗದಿಪಡಿಸಲಾಗಿದೆ. ಮೊದಲಿಗೆ ನೋಂದಾಯಿಸುವ 120 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಗತ್ಯವಿರುವ ತಂಡಗಳಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.
ಒಟ್ಟು 2 ಲಕ್ಷ ನಗದು ಬಹುಮಾನವನ್ನು ವಿಜೇತ ತಂಡಗಳಿಗೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಕೈಗಾರಿಕೋದ್ಯಮಿ ಹಾಗೂ ಮಾಜಿ ಶಾಸಕ ಎಸ್. ರುದ್ರೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಜಿ ಇಸ್ರೋ ವಿಜ್ಞಾನಿ ಡಾ. ಎಸ್. ಸುರಪಾಣಿರಾವ್, ವಿಜ್ಞಾನಿ ಡಾ. ಸಿ.ಆರ್. ನಾಗರಾಜ್, ಡಾ. ಎಸ್.ಎಸ್. ನಾಗಭೂಷಣ, ಡಾ. ಪಿ. ನಾರಾಯಣ, ಡಿ.ಸಿ. ರಾಮೇಶ್ ಸೇರಿದಂತೆ ಹಲವು ಗಣ್ಯರು ಮುಖ್ಯ ಪೋಷಕರಾಗಿ ಕಾರ್ಯಕ್ರಮಕ್ಕೆ ಬೆಂಬಲ ನೀಡಲಿದ್ದಾರೆ.