ಮಂಜುನಾಥ ಶೆಟ್ಟಿ…
ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಗೆ ಒತ್ತಾಯಿಸಿ ಶನಿವಾರ ಎನ್.ಎಸ್.ಯು.ಐ. ಅಧ್ಯಕ್ಷ ಚಿನ್ಮಯಿ ನೇತ್ರತ್ವದಲ್ಲಿ (NSUI) ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಾಗರ ಹೋಟೆಲ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಪೊಲೀಸ್ ಠಾಣೆಯ ಮಾರ್ಗವಾಗಿ ಸಂಚರಿಸಿ, ಕೋರ್ಟ್ ವೃತ್ತಕ್ಕೆ ತಲುಪಿತು. ಅಲ್ಲಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಕೆಲಕಾಲ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎನ್.ಎಸ್.ಯು.ಐ. ಅಧ್ಯಕ್ಷ ಚಿನ್ಮಯ್ ಸಿ.ಎಮ್., “ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ನೀಟ್ ಹಗರಣವೇ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ನಿರಂತರವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರೂ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರು ಶಿಕ್ಷಣ ಸಚಿವರನ್ನು ಉಳಿಸಲು ಯತ್ನಿಸುತ್ತಿರುವುದು ಖಂಡನೀಯ. ರಾಜ್ಯದ ನಾಯಕರಾದ ಸಿ.ಟಿ.ರವಿ ಹಾಗೂ ತೇಜಸ್ವಿ ಸೂರ್ಯ ಅವರು ವಿದ್ಯಾರ್ಥಿಗಳ ಸಾವಿನ ಬಗ್ಗೆ ತುಟಿಪಿಟಕ್ ಎನ್ನುತ್ತಿಲ್ಲ. ಈ ಜನವಿರೋಧಿ ಧೋರಣೆಗೆ 2029ರಲ್ಲಿ ಯುವಜನರು ತಕ್ಕ ಪಾಠ ಕಲಿಸಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಲಾಗುವುದು” ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಸದ್ದಾಂ ದೊಡ್ಮನೆ ಮಾತನಾಡಿ, “ಬಡ ಕುಟುಂಬಗಳ ಮಕ್ಕಳು ವೈದ್ಯರಾಗುವ ಕನಸು ಹೊತ್ತು ಈ ಪರೀಕ್ಷೆ ಬರೆಯುತ್ತಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.ಇದರ ಪರಿಣಾಮವಾಗಿ ಈಗಾಗಲೇ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ವಿದ್ಯಾರ್ಥಿಗಳಾದ ದೀಪ್ತಿ, ಜುಲ್ಫಿಯಾ ಹಾಗೂ ತಯ್ಯಬ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಶಿಕ್ಷಣ ಸಚಿವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಪ್ರಮುಖ ಮಹೇಂದ್ರ ಬುಕ್ಕಿವರೆ ಮಾತನಾಡಿ ಕೇಂದ್ರದ ವಿರುದ್ಧ ಹರಿದಾಯ್ದರು.ನಂತರದಲ್ಲಿ ಪ್ರತಿಭಟನಾಕಾರರು ತಹಶೀಲ್ದಾರ್ ಡಾ.ಪ್ರತಿಭಾ ರವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಕಲಸೆ ಚಂದ್ರಪ್ಪ, ಕಬೀರ್ ಚಿಪ್ಳಿ, ಕನ್ನಪ್ಪ ಮುಳಕೇರಿ, ವಿಲ್ಸನ್ ಗೋನ್ಸಾಲ್ವಿಸ್, ಸಯ್ಯದ್ ಸುಹೇಲ್. ತುಫೈಲ್.ಅಕ್ಷಯ ಜಂಬಗಾರು. ನಾರಾಯಣಪ್ಪ ವಸಿಂ ದೊಡ್ಮನೆ. ಹಾಗೂ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.